ಹುಬ್ಬಳ್ಳಿ, ಆ 26 (Daijiworld News/MSP): ರಾಜ್ಯದಲ್ಲಿ ಉಂಟಾದ ಪ್ರವಾಹ ನಷ್ಟದ ಕುರಿತು ಬಿ.ಎಸ್ ಯಡಿಯೂರಪ್ಪ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ, ರಾಜ್ಯದಲ್ಲಿ ಪ್ರವಾಹ ಅತಿವೃಷ್ಟಿಯಿಂದ ಅವರು ಒಂದು ಲಕ್ಷ ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಆದರೆ ಸಿಎಂ 40 ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂದು ಹೇಳಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಪಕ್ಷದ ಶಾಸಕಾಂಗ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರವಾಹ ಉಂಟಾಗಿ 20 ದಿನ ಕಳೆದರೂ ಕೇಂದ್ರದಿಂದ ಒಂದು ರೂಪಾಯಿ ಕೂಡ ಪರಿಹಾರ ಬಿಡುಗಡೆ ಮಾಡದ ಕೇಂದ್ರ ಸರ್ಕಾರ ತಕ್ಷಣ ಕರ್ನಾಟಕಕ್ಕೆ 5,000 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ಸುಮಾರು 18ರಿಂದ 20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೆಳೆದ ಬೆಳೆ ನಾಶ ಹಾಗೂ ಹಾನಿಯಾಗಿದೆ. ಮಳೆಯ ಆರ್ಭಟಕ್ಕೆ ಸಾವಿರಾರು ಮನೆಗಳು ನೆಲಕಚ್ಚಿದೆ. ಇವರೆಲ್ಲರಿಗೂ ಪರಿಹಾರ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ಶಾಸಕ ಎಂ.ಬಿ.ಪಾಟೀಲ್ ಅವರ ನೇತೃತ್ವದ ಕೆಪಿಸಿಸಿ ತಂಡ ಕೂಡ ಸಮೀಕ್ಷೆ ನಡೆಸಿ ವರದಿ ತಯಾರಿಸಿದೆ ಎಂದರು.
ಕೇಂದ್ರದಿಂದ ಕರ್ನಾಟಕಕ್ಕೆ ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಅಧ್ಯಯನ ತಂಡ ಈಗಾಗಲೇ ಆಗಮಿಸಿದೆ. ಈ ತಂಡ ಸರಿಯಾದ ರೀತಿಯಲ್ಲಿ ಸಮೀಕ್ಷೆ ನಡೆಸಿ ಹಾನಿ, ನಷ್ಟದ ಬಗ್ಗೆ ವರದಿ ತಯಾರಿಸಬೇಕು. ಆದಷ್ಟು ಬೇಗ ಕೇಂದ್ರಕ್ಕೆ ವರದಿ ಸಲ್ಲಿಸಿ ತಕ್ಷಾಣ ಪರಿಹಾರ ನೀಡುವಂತೆ ಮಾಡಬೇಕು ಎಂದು ಇದೇ ವೇಳೆ ಸಿದ್ದರಾಮಯ್ಯ ಒತ್ತಾಯಿಸಿದರು.