ನವದೆಹಲಿ, ಆ 26 (Daijiworld News/MSP): ಕಳೆದೆರಡು ದಿನದ ಹಿಂದೆ ಅಬುಧಾಬಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಹೆಚ್ಚಿಸುವ ಪ್ರಯತ್ನಕ್ಕೆ ಮೆಚ್ಚುಗೆಯ ಸಂಕೇತವಾಗಿ ಯುಎಇಯ ಅತ್ಯುನ್ನತ ನಾಗರಿಕ ಪ್ರಶಸ್ತಿಯ 'ಆರ್ಡರ್ ಆಫ್ ಜಾಯೆದ್' ನೀಡಿ ಗೌರವಿಸಿತ್ತು.
ಆದರೆ ಯುಎಇ ಮಾತ್ರವಲ್ಲ ಇದಕ್ಕೂ ಹಿಂದೆ ಸೌದಿ ಅರೇಬಿಯಾ, ರಷ್ಯಾ, ದಕ್ಷಿಣ ಕೊರಿಯಾ, ಅಪ್ಘಾನಿಸ್ತಾನ, ಪ್ಯಾಲೆಸ್ತೀನ್ ಮುಂತಾದ ದೇಶಗಳು ಕೂಡಾ ಪ್ರಧಾನಿ ಮೋದಿಯವರಿಗೆ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯನ್ನು ಪ್ರಧಾನ ಮಾಡಿದೆ. ಆದರೆ ಪ್ರಶಸ್ತಿ ನೀಡಿದ ದೇಶಗಳಲ್ಲಿ ಇಸ್ಲಾಮಿಕ್ ರಾಷ್ಟ್ರಗಳೇ ಮುಂಚೂಣಿಯಲ್ಲಿದೆ ಎನ್ನುವುದು ಅಚ್ಚರಿಯಾದರೂ ಸತ್ಯ.
ವಿದೇಶಿ ಪ್ರವಾಸ ಹಾಗೂ ದ್ವಿಪಕ್ಷೀಯ ಮಾತುಕತೆಗಳು, ಇಸ್ಲಾಮಿಕ್ ರಾಷ್ಟ್ರಗಳೊಂದಿಗಿನ ಭಾರತದ ಸಂಬಂಧ ಹಿಂದೆಂದಿಗಿಂತಲೂ ಉತ್ತಮವಾಗಿರಲೂ ಹಾಗೂ ಪ್ರಧಾನಿ ಮೋದಿಯವರ ವೈಯಕ್ತಿಕ ರಾಜತಾಂತ್ರಿಕ ಪ್ರಭಾವವು ಇಸ್ಲಾಮಿಕ್ ರಾಷ್ಟ್ರಗಳಿಗೆ ಸಂಬಂಧಪಟ್ಟಂತೆ ಭಾರತಕ್ಕೆ ಉತ್ತಮ ಫಲಿತಾಂಶಗಳನ್ನು ತಂದುಕೊಡಲು ಕಾರಣವಾಗಿದೆ. ಇದೇ ಬಾಂಧವ್ಯ ಗಣನೀಯ ಪ್ರಮಾಣದ ಹೂಡಿಕೆಯನ್ನು ಪಡೆದುಕೊಳ್ಳಲು, ಹಜ್ ಕೋಟಾ ಹೆಚ್ಚಳಕ್ಕೆ ಹಾಗೂ ಪಶ್ಚಿಮ ಏಷ್ಯಾದ ಹಲವಾರು ಕೈದಿಗಳು ಮನೆಗೆ ಮರಳಿ ತಮ್ಮ ಪ್ರೀತಿಪಾತ್ರರೊಡನೆ ಸೇರುವಂತಾಗಿದೆ.
ಇತ್ತೀಚಿನ ದಿನಗಳಲ್ಲಿ ಹಲವಾರು ಇಸ್ಲಾಮಿಕ್ ರಾಷ್ಟ್ರಗಳು ಪಿಎಂ ಮೋದಿಯವರಿಗೆ ತಮ್ಮ ಉನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಮೋದಿಯವರಿಗೆ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳು ನೀಡಿರುವ ಪ್ರಶಸ್ತಿಗಳ ಪಟ್ಟಿ ಇಲ್ಲಿದೆ:
1. 'ಕಿಂಗ್ ಹಮದ್ ಆರ್ಡರ್ ಆಫ್ ದ ರಿನೈಸಾನ್ಸ್', ಬಹ್ರೇನ್ - ಆಗಸ್ಟ್ 2019
2. 'ಆರ್ಡರ್ ಆಫ್ ಜಾಯೆದ್', ಯುಎಇಯ ಅತ್ಯುನ್ನತ ನಾಗರಿಕ ಪ್ರಶಸ್ತಿ - ಆಗಸ್ಟ್ 2019
3. ಪ್ಯಾಲೆಸ್ಟೈನ್ 'ಗ್ರಾಂಡ್ ಕಾಲರ ಒಫ್ ದಿ ಸ್ಟೇಟ್ ಒಫ್ ಪ್ಯಾಲೆಸ್ಟೈನ್' - ಫೆಬ್ರವರಿ 2018
4. ಅಮೀರ್ ಅಮಾನುಲ್ಲಾ ಖಾನ್ ಪ್ರಶಸ್ತಿ, ಅಫ್ಘಾನಿಸ್ತಾನ - ಜೂನ್ 2016
5. ಆರ್ಡರ್ ಆಫ್ ಕಿಂಗ್ ಅಬ್ದುಲಾ ಅಝೀಜ್ ಪ್ರಶಸ್ತಿ, ಸೌದಿ ಅರೇಬಿಯಾ - ಏಪ್ರಿಲ್ 2016
6. ಮಾಲ್ಡೀವ್ಸ್ನ ರೂಲ್ ಆಫ್ ನಿಶಾನ್ ಇಜುದ್ದಿನ್ ಪುರಸ್ಕಾರ- ಜೂನ್ 2019
ಈ ಪ್ರಶಸ್ತಿಗಳು ಕೇವಲ ಒಬ್ಬ ವ್ಯಕ್ತಿಗೆ ಮಾತ್ರವಲ್ಲ, 1.3 ಬಿಲಿಯನ್ ಭಾರತೀಯರಿಗೆ ಎಂದು ಪ್ರಧಾನಿ ಮೋದಿ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ಹೆಚ್ಚಾಗಿ ಹೇಳುತ್ತಿರುತ್ತಾರೆ.
ಇದಲ್ಲದೆ ದಕ್ಷಿಣ ಕೋರಿಯಾ ಮೋದಿ ಅವರಿಗೆ ಶಾಂತಿ ಪುರಸ್ಕಾರ ಮತ್ತು ವಿಶ್ವ ಸಂಸ್ಥೆಯು ಚಾಂಪಿಯನ್ ಆಫ್ ದಿ ಅರ್ಥ್ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಪ್ರದಾನಿಯೊಬ್ಬರು ಐದು ವರ್ಷಗಳಲ್ಲಿ 8 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದದ್ದು ಇದೇ ಮೊದಲು.