ಭುಬನೇಶ್ವರ, ಆ.26(Daijiworld News/SS): ಕಂಪನಿಯೊಂದು ಕಳುಹಿಸಿದ್ದ ಪಾರ್ಸೆಲ್ ಬಾಕ್ಸ್'ನಲ್ಲಿ ನಾಗರ ಹಾವು ಕಾಣಿಸಿಕೊಂಡ ಘಟನೆ ಓಡಿಶಾದ ಮಯೂರ್ ಭಂಜ್ ಜಿಲ್ಲೆಯ ರಾಯರಂಗ್'ನಲ್ಲಿ ನಡೆದಿದೆ.
ಆಂಧ್ರ ಪ್ರದೇಶದ ವಿಜಯ್'ವಾಡ ಮೂಲದ ಎಸ್ ಮುತ್ತುಕುಮಾರನ್ ಖಾಸಗಿ ಕೊರಿಯರ್ ಎಜೆನ್ಸಿ ಮೂಲಕ ಮನೆಗೆ ಸಂಬಂಧಿಸಿದ ದಾಖಲೆಗಳನ್ನು ಕಳೆದ 15 ದಿನಗಳ ಹಿಂದೆ ಬುಕ್ ಮಾಡಿದ್ದಾರೆ. ಈ ಪಾರ್ಸೆಲ್ ಭಾನುವಾರ (ಆ.25)ಮುತ್ತುಕುಮಾರ್ ಮನೆಗೆ ತಲುಪಿದೆ.
ವಿಪರ್ಯಾಸವೆಂದರೆ, ಮುತ್ತುಕುಮಾರ್ ಪಾರ್ಸೆಲ್ ಬಂದಿರುವ ಬಾಕ್ಷ್'ನ ಒಂದು ಭಾಗವನ್ನು ತೆರೆದಾಗ ಅವರಿಗೆ ನಾಗರಹಾವು ಕಂಡಿದೆ. ಪಾರ್ಸೆಲ್'ನಲ್ಲಿ ಹಾವು ಕಂಡ ಮುತ್ತುಕುಮಾರನ್ ಆಘಾತಕ್ಕೊಳಗಾಗಿದ್ದಾರೆ. ತಕ್ಷಣ ಅರಣ್ಯ ಇಲಾಖೆಗೆ ಕೆರೆ ಮಾಡಿದ್ದಾರೆ. ನಂತರ ಅರಣ್ಯ ಇಲಾಖೆ ಸಹಾಯದಿಂದ ಹಾವನ್ನು ರಕ್ಷಿಸಲಾಗಿದೆ.
ಈ ಕುರಿತು ಮಾತನಾಡಿದ ಮುತ್ತುಕುಮಾರನ್, ನಾನು 15 ದಿನದ ಹಿಂದೆ ಈ ಪಾರ್ಸೆಲ್ ಬುಕ್ ಮಾಡಿದ್ದೆ. ಅದರಂತೆ ಆಗಸ್ಟ್ 9ರಂದು ಗುಂಟೂರಿನ ಕೊರಿಯರ್ ಸಂಸ್ಥೆಯಿಂದ ಈ ಪಾರ್ಸೆಲ್ ಬಂದಿದೆ. ಆದರೆ ಓಡಿಶಾಗೆ ಬಂದ ನಂತರ ಈ ಹಾವು ಪಾರ್ಸೆಲ್ ಒಳಗೆ ಸೇರಿಕೊಂಡಿರಬಹುದು ಎಂದು ಹೇಳಿದ್ದಾರೆ.
ಅರಣ್ಯ ಅಧಿಕಾರಿ ಬಿಪಿನ್ ಚಂದ್ರ ಬೆಹೆರಾ ಮಾತನಾಡಿ, ಪಾರ್ಸೆಲ್ ಒಳಗೆ ಹಾವು ಇದೆ ಎಂಬ ಸಂದೇಶವನ್ನು ಸ್ವೀಕರಿಸಿದ ತಕ್ಷಣ ನಾನು ನನ್ನ ಸಹೋದ್ಯೋಗಿಯೊಂದಿಗೆ ಧಾವಿಸಿ ಹಾವನ್ನು ರಕ್ಷಿಸಿದ್ದೇವೆ. ನಂತರ ನಾವು ಅದನ್ನು ಕಾಡಿನೊಳಗೆ ಬಿಟ್ಟಿದ್ದೇವೆ ಎಂದು ಹೇಳಿದರು.