ಬೆಂಗಳೂರು,ಆ 26 (Daijiworld News/RD): ಈ ವರ್ಷದಿಂದ ಎಸೆಸೆಲ್ಸಿ ವಾರ್ಷಿಕ ಪ್ರಶ್ನೆ ಪತ್ರಿಕೆಗಳ ಸ್ವರೂಪ ಬದಲಾಗಲಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಕಲಿಕಾ ಗುಣಮಟ್ಟ ಹಾಗೂ ವಿಶ್ಲೇಷಣ ಸಾಮಾರ್ಥ್ಯ ಹೆಚ್ಚಿಸುವ ಹೊಸ ಪ್ರಯತ್ನಕ್ಕೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮುಂದಾಗಿದೆ.
2019-20 ನೇ ಎಸೆಸೆಲ್ಸಿ ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳನ್ನು ಕಡಿಮೆಗೊಳಿಸಿ, ಅನ್ವಯ, ಕೌಶಲ, ವಿವರಣಾತ್ಮಕವಾಗಿ ಉತ್ತರ ಬರೆಯಲು ಧೀರ್ಘಾವಧಿ ಪ್ರಶ್ನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಪ್ರಶ್ನೆ ಪತ್ರಿಕೆಯಲ್ಲಿ ಏಕರೂಪ ತರುವ ಉದ್ಧೇಶದಿಂದ ವಿಷಯಾಧಾರಿತ ಅಂಕಗಳನ್ನು ಹಂಚಿಕೆ ಮಾಡಿ, ವಿಷಯಾಧಾರಿತ ಉದ್ಧಿಷ್ಠಗಳು(ಒಬ್ಜೆಕ್ಟೀವ್), ಪಠ್ಯ ವಸ್ತು, ಪ್ರಶ್ನಾ ವಿಧಾನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ ಎಂದು ಮಂಡಳಿ ತಿಳಿಸಿದೆ.
ಇನ್ನು ಮುಂದೆ ಪ್ರಶ್ನೆ ಪತ್ರಿಕೆಯಲ್ಲಿ40 ಪ್ರಶ್ನೆಗಳ ಬದಲಿಗೆ 38 ಪ್ರಶ್ನೆಗಳಿರುತ್ತದೆ. ಪರೀಕ್ಷೆಯಲ್ಲಿ ಎಲ್ಲಾ ಪ್ರಶ್ನೆಗಳು ಪ್ರಾಮುಖ್ಯವಾಗಿದ್ದು,ಶಿಕ್ಷಕರು ಎಲ್ಲಾ ಅಧ್ಯಯಗಳನ್ನು ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದು ಕಡ್ಡಾಯವಾಗಿರುತ್ತದೆ. ಧೀರ್ಘ ಉತ್ತರದ ಪ್ರಶ್ನೆಗಳನ್ನು ಪರೀಕ್ಷೆಯಲ್ಲಿ ಹೆಚ್ಚಾಗಿ ಕೇಳುವುದರಿಂದ, ಇದಕ್ಕೆ ಉತ್ತರ ಬರೆಯುವುದರಿಂದ ಮಕ್ಕಳಲ್ಲಿ ಬರವಣಿಗೆ ಕೌಶಲ ಜೊತೆಗೆ ಅಭಿವ್ಯಕ್ತಿ ಕೌಶಲ ಬೆಳೆಯುತ್ತದೆ. ಇನ್ನು ಶಿಕ್ಷಕರಿಗೆ ಬೋಧನೆಗೆ ಅನುಕೂಲವಾಗುವಂತೆ ತಂತ್ರಜ್ಞಾನ ಬಳಸಲು ಇಲಾಖೆ ಸೂಚಿಸಿದೆ.
ಆರು ವಿಷಯಗಳಲ್ಲಿ ಅಂಕಗಳನ್ನು, ಜ್ಞಾನದ ಮಟ್ಟ ಮತ್ತು ಪಠ್ಯ ವಿಷಯ ಆಧಾರಿತವಾಗಿ ಪ್ರತ್ಯೇಕ ಅಂಕಗಳನ್ನು ಹಂಚಿಕೆ ಮಾಡಲಾಗಿದೆ. ಪ್ರಥಮ, ದ್ವಿತೀಯ ಹಾಗೂ ತೃತೀಯ ಭಾಷೆಯ ವಿಷಯಗಳಲ್ಲಿ ಸ್ಮರಣೆಗೆ 21 ಅಂಕ, ಅರ್ಥೈಸುವಿಕೆಗೆ 36 ಅಂಕ, ಮೆಚ್ಚುಗೆ ಹಾಗೂ ಬರವಣಿಗೆ ಕೌಶಲ್ಯಕ್ಕೆ 4 ಅಂಕವನ್ನು ಜ್ಞಾನಮಟ್ಟ ಗ್ರಹಣದಡಿ ಹಂಚಿಕೆ ಮಾಡಲಾಗಿದೆ. ಪಠ್ಯ ವಿಷಯಾಧಾರವಾಗಿ ಗದ್ಯಕ್ಕೆ 28, ಪದ್ಯಕ್ಕೆ 30, ಪೂರಕ ಓದಿಗೆ 9, ವ್ಯಾಕರಣಕ್ಕೆ 29 ಹಾಗೂ ಅಪಠಿತಕ್ಕೆ 4 ಅಂಕ ಹಂಚಿಕೆ ಮಾಡಲಾಗಿದೆ. ಗಣಿತ, ವಿಜ್ಞಾನ ಹಾಗೂ ಸಮಾಜಕ್ಕೆ ವಿಷಯಾಧಾರಿತವಾಗಿ ಅಂಕಗಳ ಹಂಚಿಕೆ ಮಾಡಲಾಗಿದೆ. ಇಲ್ಲಿ ಕೌಶಲ್ಯಕ್ಕೆ ಆದ್ಯತೆ ನೀಡಲಾಗಿದೆ.
ವಿದ್ಯಾರ್ಥಿಗಳಲ್ಲಿ ಬರವಣಿಗೆ ಕೌಶಲ ಹೆಚ್ಚಿಸುವ ಉದ್ಧೇಶದಿಂದ ಪ್ರಸಕ್ತ ಸಾಲಿನ ಎಸೆಸೆಲ್ಸಿ ಪ್ರಶ್ನೆ ಪತ್ರಿಕೆಯ ಸ್ವರೂಪದಲ್ಲಿ ಸ್ವಲ್ಪ ಬದಲಾವಣೆ ಮಾಡಲು ತೀರ್ಮಾನ ಮಾಡಿದ್ದೇವೆ. ಒಂದು ಐದು ಅಂಕದ ವಿಸ್ತೃತ ಉತ್ತರದ ಪ್ರಶ್ನೆಯನ್ನು ಹೊಸದಾಗಿ ಸೇರಿಸಲಾಗಿದೆ. ವಿದ್ಯಾರ್ಥಿಗಳ ಕಲಿಕ ಗುಣಮಟ್ಟ ಸುಧಾರಣೆಗೆ ಇದು ಸಹಕಾರಿಯಾಗಲಿದೆ. ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ. ಸುಮಂಗಳಾ ಹೇಳಿದ್ದಾರೆ.
ಕಳೆದ ಹಲವು ವರ್ಷಗಳಿಂದ ಎಸೆಸೆಲ್ಸಿ ವಿದ್ಯಾರ್ಥಿಗಳ ಪ್ರಶ್ನೆ ಪತ್ರಿಕೆಯಲ್ಲಿ ಬಹು ಆಯ್ಕೆಯ ಪ್ರಶ್ನೆಗಳನ್ನು ಹೆಚ್ಚಾಗಿ ನೀಡುತ್ತಿದ್ದರು, ವಿವರಣಾತ್ಮಕ ಪ್ರಶ್ನೆಗಳ ಸಂಖ್ಯೆ ಕಡಿಮೆ ಇತ್ತು. ಇದರಿಂದ ವಿದ್ಯಾರ್ಥಿಗಳು ಬರವಣಿಗೆ ಕೌಶಲ ಕಡಿಮೆಯಾಗುತ್ತಿದೆ ಎಂಬ ದೂರು ಮಂಡಳಿಗೆ ಬಂದಿತ್ತು. ಎಸೆಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ವೃತ್ತಿ ಶಿಕ್ಷಣದ ಕೋರ್ಸ್ಗಳಲ್ಲಿ ಬರವಣಿಗೆ ಹೆಚ್ಚು ಇರುವುದರಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ವಿಸ್ತೃತವಾಗಿ ಬರೆಯಲು ಅವಕಾಶ ಮಾಡಿಕೊಡಬೇಕು ಎಂಬ ಉದ್ದೇಶದಿಂದ ಈ ಬದಲಾವಣೆಯನ್ನು ಮಂಡಳಿ ಕೈಗೊಂಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.