ಬೆಂಗಳೂರು,ಆ 26 (Daijiworld News/MSP): ಬಿಜೆಪಿಯಲ್ಲಿ ಪಕ್ಷಕ್ಕಿಂತ ಯಾರು ದೊಡ್ಡವರಲ್ಲ. ಮೊದಲು ಪಕ್ಷ ಅಮೇಲೆ ವ್ಯಕ್ತಿ. ಹೀಗಾಗಿ ಬಿಜೆಪಿ ಪಕ್ಷದಲ್ಲಿ ಬಣ ರಾಜಕೀಯಕ್ಕೆ ಆಸ್ಪದವೇ ಇಲ್ಲ. ನಳಿನ್ ಕುಮಾರ್ ಕಟೀಲ್ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವ ಕಾರಣ ಪಕ್ಷ ಎರಡು ಬಣವಾಗಿ ಇಬ್ಭಾಗವಾಗಿದೆ ಎನ್ನುವ ವದಂತಿ ಸತ್ಯಕ್ಕೆ ದೂರವಾದದ್ದು ಎಂದು ಸಚಿವ ಡಾ| ಅಶ್ವತ್ಥ್ ನಾರಾಯಣ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಈ ವಿಚಾರವಾಗಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್ ನೇತೃತ್ವದಲ್ಲಿ ನಡೆಸಿರುವ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಅಶ್ವತ್ಥ್ ನಾರಾಯಣ್ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ಹೈಕಮಾಂಡ್ ಅಮಿತ್ ಶಾ, ದಕ್ಷಿಣ ಕನ್ನಡ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿದ ಬಳಿಕ, ಇದನ್ನು ಬಸನಗೌಡ ಪಾಟೀಲ್ ಯತ್ನಾಲ್ ಸೇರಿದಂತೆ ಒಂದಷ್ಟು ಉತ್ತರ ಕರ್ನಾಟಕ ಭಾಗದ ಶಾಸಕರು ಪರೋಕ್ಷವಾಗಿ ವಿರೋಧಿಸಿದ್ದಾರೆ. ಹೈಕಮಾಂಡ್ನ ನಳಿನ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ ನಿರ್ಧಾರದಿಂದ ಬಿಜೆಪಿ ಎರಡು ಬಣವಾಗಿದೆ ಎಂದು ವದಂತಿ ಹರಡಿತ್ತು.
ಆದರೆ ಇದನ್ನು ಸಾರಾಸಗಟಾಗಿ ತಿರಸ್ಕೃರಿಸಿದ, ಅಶ್ವತ್ಥ್ ನಾರಾಯಣ್ ಈ ಬಾರಿ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಯಡಿಯೂರಪ್ಪ ನೇತೃತ್ವಕ್ಕೆ ಜನ ಬೆಂಬಲ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ 26 ಸಂಸದರು ಗೆಲುವಿನ ನಗೆ ಬೀರಿದ್ದಾರೆ. ಇನ್ನು ಕರಾವಳಿಯಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಟವಾಗಿದೆ. ಹೀಗಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಯಡಿಯೂರಪ್ಪ ಅವರಿಗೆ ಸಮರ್ಥ ಉತ್ತರಾಧಿಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಮಂಗಳವಾರ ಬೆಳಗ್ಗೆ 10.30ಕ್ಕೆ ಬಿಜೆಪಿ ಕಚೇರಿಯ ಮುಂಭಾಗದಲ್ಲಿ ರಾಜ್ಯಾಧ್ಯಕ್ಷ ಅಧಿಕಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.