ಬೆಂಗಳೂರು, ಆ.27(Daijiworld News/SS): ಬಹುಕೋಟಿ ವಂಚನೆ ಪ್ರಕರಣದ ಆರೋಪಿ, ಐಎಂಎ ಜ್ಯುವೆಲ್ಸ್ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ಗೆ ಸೇರಿದ ಒಟ್ಟು 2.15 ಕೋಟಿ ಮೌಲ್ಯದ ಚರಾಸ್ತಿ ಮತ್ತು 2.20 ಕೋಟಿ ನಗದನ್ನು ವಿಶೇಷ ತನಿಖಾ ತಂಡದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಸಕ್ಷಮ ಪ್ರಾಧಿಕಾರದ ಪ್ರಾದೇಶಿಕ ಆಯುಕ್ತರು ನಿಯೋಜಿಸಿರುವ ಅಧಿಕಾರಿಗಳ ಜೊತೆ ಸೇರಿಕೊಂಡು ಎಸ್ಐಟಿ ತಂಡವು ಐಎಂಎ ಸಂಸ್ಥೆಗೆ ಸಂಬಂಧಿಸಿದ ಆರು ಕಡೆಗಳಲ್ಲಿ ಶೋಧ ನಡೆಸಿದೆ. ಜಯನಗರ, ಯಶವಂತಪುರ, ಶಿವಾಜಿನಗರ ಹಾಗೂ ತಿಲಕ್ ನಗರದಲ್ಲಿರುವ ಐಎಂಎ ಗೋಲ್ಡ್, ಬನ್ನೇರುಘಟ್ಟ ರಸ್ತೆಯಲ್ಲಿರುವ ಐಎಂಎ ಪಬ್ಲಿಷರ್ಸ್ ಕಂಪನಿಯ ಮೇಲೆ ಶೋಧ ನಡೆಸಿದ್ದಾರೆ.
ಈ ವೇಳೆ ಎಸ್ಐಟಿ ಅಧಿಕಾರಿಗಳು ಪೀಠೋಪಕರಣಗಳು ಸೇರಿ 2.15 ಕೋಟಿ ಮೌಲ್ಯದ ಚರಾಸ್ತಿ ಜಪ್ತಿ ಮಾಡಿದ್ದಾರೆ. ಸಿಕ್ಕಿದ ಚರಾಸ್ತಿಗಳನ್ನು ಪಟ್ಟಿ ಮಾಡಿ ಮಹಜರು ಮೂಲಕ ದಾಸ್ತಾನು ಮಾಡಲಾಗಿದೆ. ಅವುಗಳ ಹರಾಜು ಪ್ರಕ್ರಿಯೆ ನಡೆಸಲು ಸಕ್ಷಮ ಪ್ರಾಧಿಕಾರದ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಮನ್ಸೂರ್ ಐಎಂಎ ಸಂಸ್ಥೆಯ ಮೂಲಕ ಅಬ್ದುಲ್ ಸಾಬೀರ್ ಜತೆ ಸೇರಿ ಸ್ಕೈವಾಕ್ ನಿರ್ಮಾಣ ವ್ಯವಹಾರ ನಡೆಸುತ್ತಿದ್ದ. ಮನ್ಸೂರ್ನಿಂದ ಅಬ್ದುಲ್ ಸಾಬೀರ್ 2 ಕೋಟಿ ಪಡೆದಿರುವುದು ತನಿಖೆಯ ಸಂದರ್ಭದಲ್ಲಿ ಪತ್ತೆಯಾಗಿದೆ. ಜೊತೆಗೆ ಬಿಎಂಡಬ್ಲ್ಯೂ ಕಾರು ಖರೀದಿಸಲು ನವನೀತ್ ಮೋಟಾರ್ಸ್ ಕಂಪನಿಗೆ ಮನ್ಸೂರ್ ಮುಂಗಡವಾಗಿ 10 ಲಕ್ಷ ನೀಡಿರುವುದು ಎಸ್ಐಟಿ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಹಣವನ್ನೂ ಡಿಡಿ ಮೂಲಕ ನವನೀತ್ ಮೋಟಾರ್ಸ್ ಕಂಪನಿಯಿಂದ ಪಡೆದುಕೊಳ್ಳಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.