ಬೆಂಗಳೂರು, ಆ.27(Daijiworld News/SS): ಜುಲೈ 22 ರಂದು ಉಡ್ಡಯನಗೊಂಡ ಚಂದ್ರಯಾನ 2 ಮೂನ್ ಮಿಶನ್ ಎರಡನೇ ಬಾರಿಗೆ ಚಂದ್ರನ ಮೇಲಿರುವ ಕುಳಿಗಳನ್ನು ಸೆರೆ ಹಿಡಿದಿದ್ದು, ತಾನು ಕ್ಲಿಕ್ಕಿಸಿದ ಚಿತ್ರಗಳನ್ನು ರವಾನಿಸಿದೆ.
ಟೆರೇನ್ ಮ್ಯಾಪಿಂಗ್ ಕ್ಯಾಮರಾ (ಟಿಎಂಸಿ-2) 4375 ಕಿಮೀ ದೂರದಿಂದ ಚಿತ್ರಗಳನ್ನು ಸೆರೆಹಿಡಿದಿದೆ. ಆಗಸ್ಟ್ 23 ರಂದು ಚಂದ್ರನ ಮೇಲ್ಮೈ ಚಿತ್ರವನ್ನು ಕ್ಲಾಮರಾ ಕ್ಲಿಕ್ಕಿಸಿ ಕಳಿಸಿತ್ತು. ಇದೀಗ ಮತ್ತೆ ಕೆಲವು ಚಿತ್ರಗಳನ್ನು ಕಳಿಸಿದ್ದು, ಅದರಲ್ಲಿ ಚಂದ್ರನ ಕಿಳಿಗಳಾದ ಜಾಕ್ಸನ್, ಮಿತ್ರಾ, ಮ್ಯಾಕ್ ಮತ್ತು ಕೊರೊಲೆವ್'ಗಳು ಕಾಣಿಸಿವೆ.
ಚಂದ್ರನ ಕುಳಿಗಳಿಗೆ ವಿಜ್ಞಾನಿಗಳ ಹೆಸರನ್ನು ನಾಮಕರಣ ಮಾಡಲಾಗಿದ್ದು, ಮಿತ್ರಾ ಎಂಬುದು ಭಾರತೀಯ ಭೌತಶಾಸ್ತ್ರಜ್ಞರೊಬ್ಬರ ಹೆಸರಾಗಿದೆ. ಪ್ರೊ. ಶಿಶಿರ್ ಕುಮಾರ್ ಮಿತ್ರಾ ಅವರ ನೆನಪಿಗಾಗಿ ಚಂದ್ರನ 92 ಸುತ್ತಳತೆಯ ಕುಳಿಗೆ ಮಿತ್ರಾ ಎಂದು ಹೆಸರಿಡಲಾಗಿದೆ. ಚಂದ್ರಯಾನ 2 ಕಳಿಸಿರುವ ಚಿತ್ರದಲ್ಲಿ ಈ ಕುಳಿಯೂ ಪತ್ತೆಯಾಗಿದೆ.
ಜಾಕ್ಸನ್ ಹೆಸರಿನ ಪ್ರಭಾವ ಕುಳಿ ಚಂದ್ರನ ಉತ್ತರ ಭಾಗದಲ್ಲಿ ಬಾಹ್ಯ ವಸ್ತುವಿನ ಡಿಕ್ಕಿಯ ಪ್ರಭಾವದಿಂದ ಉಂಟಾಗಿರುವ ಒಂದು ಕುಳಿಯಾಗಿದೆ. ಅದು 71 ಕಿಮೀ ವ್ಯಾಸದ್ದಾಗಿದೆ ಎಂದು ಇಸ್ರೋ ಹೇಳಿದೆ.
ನೌಕೆಯಲ್ಲಿರುವ ವಿಕ್ರಮ್ ಲ್ಯಾಂಡರ್ ಸೆ.2ರಂದು ನೌಕೆಯಿಂದ ಬೇರ್ಪಡಲಿದ್ದು, ಸೆ 7ರಂದು ಮೊದಲು ಚಂದ್ರನ ಮೇಲೆ ಕಾಲಿಡಲಿದೆ.