ಬೆಂಗಳೂರು, ಆ.27(Daijiworld News/SS): ಪ್ರವಾಹದಿಂದ ನಲುಗಿರುವ ರಾಜ್ಯಕ್ಕೆ ಮಧ್ಯಂತರ ಪರಿಹಾರ ನೀಡುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ದೆಹಲಿಯಿಂದ ಆಗಮಿಸಿರುವ ಅಧಿಕಾರಿಗಳ ತಂಡ ಆಸಕ್ತಿ ತೋರಿದೆ. ಇದೇ ವೇಳೆ ಸಂತ್ರಸ್ತ ಪ್ರದೇಶಗಳ ಪುನರುಜ್ಜೀವನಕ್ಕಾಗಿ ವಿಶೇಷ ಪ್ಯಾಕೇಜ್ ನೀಡುವಂತೆ ರಾಜ್ಯ ಸರ್ಕಾರ ಒತ್ತಾಯಿಸಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್ದು, ಕೇಂದ್ರ ತಂಡವು ಈಗಾಗಲೇ ರಾಜ್ಯದ ಪ್ರವಾಹ ಪೀಡಿತ ಪ್ರದೇಶದಲ್ಲಿ ಅಧ್ಯಯನ ನಡೆಸುತ್ತಿದೆ. ಅಧ್ಯಯನ ವರದಿ ಸಲ್ಲಿಸಿದ ನಂತರ ದೊಡ್ಡ ಪ್ರಮಾಣದ ಪರಿಹಾರ ಅನುದಾನ ಕೇಂದ್ರದಿಂದ ಬರುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಅಧ್ಯಯನಕ್ಕೆ ಕೇಂದ್ರದಿಂದ ತಂಡ ಬಂದಿದ್ದು, ಅಧ್ಯಯನ ನಡೆಸಿ ನಮ್ಮಿಂದಲೂ ಮಾಹಿತಿ ಪಡೆಯಲಿದ್ದಾರೆ. ನಾವು ಈಗಾಗಲೇ ಹಲವು ಮಾಹಿತಿಯನ್ನು ನೀಡಿದ್ದೇವೆ ಎಂದು ತಿಳಿಸಿದರು.
ಈ ತಂಡ ಕೇಂದ್ರಕ್ಕೆ ವರದಿ ಸಲ್ಲಿಸಿದ ನಂತರ ಅತ್ಯಂತ ದೊಡ್ಡ ಮಟ್ಟದ ಪರಿಹಾರ ಧನ ರಾಜ್ಯಕ್ಕೆ ಬರುವ ನಿರೀಕ್ಷೆ ಇದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರವಾಹದ ಗಂಭೀರತೆಯನ್ನು ವೈಮಾನಿಕ ಸಮೀಕ್ಷೆಯ ಮೂಲಕ ಅರಿತುಕೊಂಡಿದ್ದಾರೆ. ಹೀಗಾಗಿ ರಾಜ್ಯಕ್ಕೆ ಯಾವುದೇ ರೀತಿಯಲ್ಲೂ ಅನ್ಯಾಯ ಆಗುವುದಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಇಷ್ಟು ದೊಡ್ಡ ಮಟ್ಟದ ಪ್ರಾಕೃತಿಕ ವಿಕೋಪ ನಡೆದಾಗ ವಿರೋಧ ಪಕ್ಷದವರು ಕೇಂದ್ರದಿಂದ ಅನುದಾನ ಬಂದಿಲ್ಲ ಎಂದು ಟೀಕೆ ಮಾಡುವುದು ಸರಿಯಲ್ಲ. ಕೇಂದ್ರದಿಂದ ಅನುದಾನ ಬಂದೇ ಬರುತ್ತದೆ. ನಮ್ಮ ಕೋರಿಕೆಯ ಮೇರೆಗೆ ತಕ್ಷಣವೇ ಅಧ್ಯಯನಕ್ಕೆ ತಂಡ ಕಳುಹಿಸಿದ್ದಾರೆ. ಅಗತ್ಯ ಬಿದ್ದರಷ್ಟೇ ಸರ್ವಪಕ್ಷದ ನಿಯೋಗ ತೆಗೆದುಕೊಂಡು ಹೋಗುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.