ಲಕ್ನೋ, ಆ 27 (Daijiworld News/RD): ಬಿಜೆಪಿ ಪಕ್ಷದಲ್ಲಿ ಸುಷ್ಮಾ ಸ್ವರಾಜ್, ಕೆಂದ್ರದ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಸೇರಿದಂತೆ ಹಲವು ಗಣ್ಯ ನಾಯಕರು ನಿಧನ ಹೊಂದಿದ್ದು, ಅವರ ಸಾವಿಗೆ ವಿಪಕ್ಷ ನಾಯಕರು ಮಾಡಿದ ಮಾಟ ಮಂತ್ರವೇ ಕಾರಣ ಎಂದು ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಗಂಭೀರವಾಗಿ ಆರೋಪಿಸಿದ್ದಾರೆ.
ಲಕ್ನೋದ ಬಿಜೆಪಿ ಕಚೇರಿಯಲ್ಲಿ ಅಗಲಿದ ಗಣ್ಯರಿಗೆ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಇವರು, ಇತ್ತಿಚೆಗೆ ಲೋಕಸಭೆ ಚುನಾವಣೆಯ ಪ್ರಚಾರದ ವೇಳೆ ಆಧ್ಯಾತ್ಮ ಗುರುವೊಬ್ಬರು ಹೇಳಿದಂತೆ ವಿಪಕ್ಷ ನಾಯಕರು ಬಿಜೆಪಿ ನಾಯಕರನ್ನು ಇಲ್ಲವಾಗಿಸಲು ಮಾಟ-ಮಂತ್ರ ಮಾಡಿಸುತ್ತಾರೆ ಎಂದಿದ್ದರು. ಆದರೆ ಈಗ ಅನ್ನಿಸುತ್ತದೆ ಆ ಮಾತು ನಿಜ ಎಂದು. ಬಿಜೆಪಿ ನಾಯಕರನ್ನು ಪಳಗಿಸಲು ವಿಪಕ್ಷಗಳು ಮಾರಕ ಶಕ್ತಿಯ ತಂತ್ರವನ್ನು ಬಳಸುತ್ತಿದೆ. ಬಿಜೆಪಿ ನಾಯಕರಿಗೆ ಮಾಟ ಮಂತ್ರದಂತಹ ಕ್ರಿಯೆಗಳನ್ನು ಮಾಡಿ ನಾಯಕರನ್ನು ಸಾಯಿಸುತ್ತಿದ್ದಾರೆ.
ಒಂದೇ ತಿಂಗಳಲ್ಲಿ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಕೆಂದ್ರದ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ, ಮಧ್ಯ ಪ್ರದೇಶದ ಮಾಜಿ ಸಿಎಂ ಬಾಬುಲಾಲ್ ಗೌರ್ ಸೇರಿದಂತೆ ಸಾಲು ಸಾಲು ಹಿರಿಯ ಬಿಜೆಪಿ ಗಣ್ಯರು ನಿಧನ ಹೊಂದಿದ್ದಾರೆ, ಇದಕ್ಕೆ ವಿಪಕ್ಷ ದುಷ್ಟ ಕೃತ್ಯವೇ ಕಾರಣ ಎಂದು ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದಾರೆ.
ಸದಾ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸುದ್ದಿಯಾಗುವ, ಬಿಜೆಪಿ ಅಭ್ಯರ್ಥಿ ಪ್ರಜ್ಞಾಸಿಂಗ್ ಠಾಕೂರ್ ಈ ಮೊದಲು ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ದೇಶಭಕ್ತ ಎಂಬ ಹೇಳಿಕೆ ನೀಡಿದ್ದರು.