ಬೆಂಗಳೂರು, ಆ 27 (Daijiworld News/MSP): ನಾನು ಅಸಮಾಧಾನಿತನೂ ಅಲ್ಲ, ಬಂಡಾಯಗಾರನೂ ಅಲ್ಲ. ಸಚಿವ ಸ್ಥಾನಕ್ಕಾಗಿ ನಾನು ಲಾಭಿ ಮಾಡಿರಲಿಲ್ಲ. ಇಂತಹ ಖಾತೆಯೇ ನನಗೆ ನೀಡಬೇಕು ಎಂದು ನಾನು ಯಾರನ್ನೂ ಕೇಳಿಲ್ಲ ಎಂದು ಸಚಿವ ಸಿ.ಟಿ.ರವಿ ಸ್ಪಷ್ಟಪಡಿಸಿದ್ದಾರೆ.
"ಎಲ್ಲರಿಗೂ ಗೊತ್ತಿದೆ ಪಕ್ಷನಿಷ್ಠೆಯೇ ನನ್ನ ಶಕ್ತಿ ಮತ್ತು ನನ್ನ ದೌರ್ಬಲ್ಯ. ನನ್ನ ನಿಷ್ಠೆ ಕೇವಲ ಬಿಜೆಪಿಗೆ. ಆದರೆ ನಾನು ಸಿದ್ದಾಂತ ನಿಷ್ಠ ಸ್ವಾಭಿಮಾನಿ. ಸ್ವಾಭಿಮಾನಕ್ಕೆ ಧಕ್ಕೆ ಆದಾಗ ನನ್ನೊಳಗಿನ ಹೋರಾಟಗಾರ ಎದ್ದು ನಿಲ್ಲುತ್ತಾನೆ. ನಾನೇನು ಮಾಡಲಿ, ನಾನು ಜನರ ನಡುವಿನಿಂದ ಬೆಳೆದು ಬಂದ ಹೋರಾಟಗಾರ".
"ನಾನು ಯಾರ ಮುಂದೆಯೂ ಮಂತ್ರಿಸ್ಥಾನವನ್ನೇ ಕೇಳಿರಲಿಲ್ಲ. ಇನ್ನು ಖಾತೆಯ ಬಗ್ಗೆ ಯಾಕೆ ಕೇಳಲಿ ? ? ಕೆಲವು ನ್ಯೂಸ್ ಚಾನೆಲ್ ಗಳು ನನ್ನ ಪಕ್ಷನಿಷ್ಠೆ ಬಗ್ಗೆಯೇ ಸಂಶಯ ಪಡುತ್ತಿವೆ. ಅಯ್ಯೋ ಪಾಪ. ಅಧಿಕಾರಕ್ಕಾಗಿ ಮಂಡಿಯೂರುವವನೂ ಅಲ್ಲಾ, ಜನಪ್ರೀತಿಗಳಿಸಲು ಅಧಿಕಾರವೇ ಬೇಕೆಂದು ಇಲ್ಲ. ನಾನು ಅಸಾಮಾಧಾನಿತನು ಅಲ್ಲ ಬಂಡಾಯಗಾರನೂ ಅಲ್ಲ. ನಾನು ಇರುವುದು ಬಿಜೆಪಿಯಲ್ಲಿ ಸಾಯುವುದು ಕೂಡ ಬಿಜೆಪಿಯಲ್ಲೇ""
ಎಂದು ತಮ್ಮ ಟ್ವೀಟರ್ ಖಾತೆಯಲ್ಲಿ, ಸರಣಿ ಟ್ವೀಟ್ ಗಳ ಮೂಲಕ "ಖಾತೆ ಕ್ಯಾತೆ" ಬಗ್ಗೆ ಹರಡಿದ್ದ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದಲ್ಲದೆ ಇಂದು ನಡೆಯುವ ನಳೀನ್ ಕುಮಾರ್ ಕಟೀಲು ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ನಾವೆಲ್ಲರೂ ಪಾಲೊಳ್ಳುವ ಎಂದು ಕರೆ ನೀಡುವ ಮೂಲಕ ವದಂತಿಗಳಿಗೆ ತೆರೆ ಎಳೆಯುವ ಪ್ರಯತ್ನ ನಡೆಸಿದ್ದಾರೆ.