ಬೆಂಗಳೂರು,ಆ 27 (Daijiworld News/RD): ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಲ್ಲೇಶ್ವರದಲ್ಲಿನ ಭಾರತೀಯ ಜನತಾ ಪಕ್ಷ ಪ್ರಧಾನ ಕಛೇರಿಯಲ್ಲಿ ಇಂದು ಅಧಿಕಾರ ಸ್ವೀಕರಿಸಿದರು.
ಬಿಜೆಪಿ ಕಚೇರಿ ಎದರು ನಡೆದ ಕಾರ್ಯಕ್ರಮದಲ್ಲಿ ನೂತನ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ಗೆ ಪಕ್ಷದ ಧ್ವಜ ನೀಡುವ ಮೂಲಕ ನಿರ್ಗಮಿತ ರಾಜ್ಯಾಧ್ಯಕ್ಷ ಸಿಎಂ ಯಡಿಯೂರಪ್ಪ ಅಧಿಕಾರ ಹಸ್ತಾಂತರಿಸಿದರು. ನೂತನ ಅಧ್ಯಕ್ಷರಿಗೆ ಸನ್ಮಾನ ಮಾಡಲಾಯಿತು. ಪ್ರತಿಯಾಗಿ ನಿರ್ಗಮಿತ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೂ ಸನ್ಮಾನಿಸಲಾಯಿತು.ಅಧಿಕಾರ ಸ್ವೀಕಾರ ಮಾಡಿ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಇದು ಪುಣ್ಯ ಕ್ಷೇತ್ರ, ಶಿವಾಜಿ ಮಹಾರಾಜರಿಗೆ ಪ್ರೇರಣೆ ಕೊಟ್ಟ, ವಿವೇಕಾನಂದರು ನಡೆದಾಡಿದ ಪುಣ್ಯಭೂಮಿಯಿದು. ಕಾಡು ಮಲ್ಲೇಶ್ವರದ ಸನ್ನಿಧಿಯಲ್ಲಿ ಪದಗ್ರಹಣ ಮಾಡಿದ ನಾನೇ ಧನ್ಯ ಎಂದರು. ಪಕ್ಷದ ಪ್ರಮುಖರು ನನ್ನ ಮೇಲಿಟ್ಟಿರುವ ನಂಬಿಕೆ ಉಳಿಸಿಕೊಳ್ಳುತ್ತೇನೆ. ಯಡಿಯೂರಪ್ಪ ಮತ್ತು ಅವರ ಇಡೀ ತಂಡದ ಸಲಹೆ ಮಾರ್ಗದರ್ಶನ ಪಡೆದು ಜವಾಬ್ದಾರಿ ನಿರ್ವಹಣೆ ಮಾಡುತ್ತೇನೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬೆಳಗ್ಗೆ 9 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿದ ನೂತನ ಅಧ್ಯಕ್ಷರನ್ನು, ಸಂಸದರಾದ ಬಿ.ಎನ್ ಬಚ್ಚೇಗೌಡ, ಮುನಿಸ್ವಾಮಿ, ಪ್ರತಾಪ ಸಿಂಹ, ಶಾಸಕರಾದ ಅಂಗಾರ, ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಬರಮಾಡಿಕೊಂಡರು. ಬಳಿಕ ವೀರಗಾಸೆ, ಡೊಳ್ಳು ಕುಣಿತದೊಂದಿಗೆ ಅವರನ್ನು ಭವ್ಯವಾಗಿ ಸ್ವಾಗತಿಸಲಾಯಿತು. ಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು, ಅದ್ಧೂರಿಯಾಗಿ ರಾಜ್ಯ ಕಚೇರಿಗೆ ಆಗಮಿಸಿದರು. ಸಂಸದ ಕಟೀಲ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ಸಚಿವರು, ಸಂಸದರು, ಪ್ರಮುಖರ ಮುಂದೆ ಪದಗ್ರಹಣ ಮಾಡಲಾಯಿತು. ಈ ವೇಳೆ ಪಕ್ಷದ ಹಲವು ಶಾಸಕರು ಗೈರಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ಸಂಭ್ರಮದಲ್ಲಿ ಕರಾವಳಿಯಿಂದ 2500ಕ್ಕೂ ಹೆಚ್ಚು ಬಿಜೆಪಿ ಪಕ್ಷದ ಕಾರ್ಯಕರ್ತರು ಮತ್ತು ನಳಿನ್ ಅವರ ಅಭಿಮಾನಿಗಳು ಪಾಲ್ಗೊಂಡಿದ್ದರು.