ಜಮಖಂಡಿ,ಆ 27 (Daijiworld News/RD): ಬಿಜೆಪಿ ಹೈಕಮಾಂಡ್ ಮೂವರಿಗೆ ಡಿಸಿಎಂ ಪಟ್ಟ ನೀಡಿದಕ್ಕೆ ಈಗಾಗಲೇ ಪಕ್ಷದೊಳಗೆ ಅಸಮಾಧಾನ ವ್ಯಕ್ತವಾಗಿದ್ದು, ಸರ್ಕಾರದ ಅಂತ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಹಾಗಾಗಿ ಸರ್ಕಾರ ಹೆಚ್ಚು ದಿನ ಉಳಿಯಲ್ಲ, ಶೀಘ್ರದಲ್ಲಿ ಪತನವಾಗಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ಅಮಿತ್ ಶಾಗೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಲು ಇಷ್ಟವಿರಲಿಲ್ಲ, ಹೀಗಿದ್ದರು ಹೇಗೋ ಕಷ್ಟ ಪಟ್ಟು ಅಧಿಕಾರ ಪಡೆದುಕೊಂಡ ಬಿಎಸ್ ವೈ. ಇದರ ಬೆನ್ನಲ್ಲೇ ಮೂವರು ಸಚಿವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಿದ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಿದೆ ಎಂದರು.
ಮುಖ್ಯಮಂತ್ರಿಗಳು ಸಂಪುಟ ವಿಸ್ತರಣೆ ವೇಳೆಯಲ್ಲಿಯೂ ಹಲವು ಸಚಿವಾಕಾಂಕ್ಷಿಗಳಿಗೆ ಖಾತೆ ಕೈ ತಪ್ಪಿ ಹೋಗಿದ್ದು, ಹಲವರಲ್ಲಿ ಅಸಮಾಧಾನ ಮೂಡಿಸಿತ್ತು. ಅದಾದ ಬಳಿಕ ಈ ಹಿಂದೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾಗಿದ್ದವರಿಗೆ ಸ್ಥಾನ ನೀಡದೆ ಕೈ ಕೊಟ್ಟಿದ್ದು, ಪಕ್ಷದೊಳಗೊಳಗೆ ಹಾಗೂ ಕಾರ್ಯಕರ್ತರಲ್ಲಿ ತೀವ್ರ ಆಕ್ರೋಶಕ್ಕೆ ಎಡೆಮಾಡಿದೆ. ಹೀಗಾಗಿ ಖಂಡಿತ ಸದ್ಯದಲ್ಲಿ ಬಿಜೆಪಿ ಪಕ್ಷದಲ್ಲಿ ಅಸಮಾಧಾನ ಸ್ಫೋಟವಾಗಲಿದೆ. ತಾನು ಮಾಡಿದ ತಪ್ಪಿಗೆ ತಕ್ಕ ಪಾಠ ಅನುಭವಿಸಲಿದೆ. ಈ ಎಲ್ಲಾ ಅಪರಾಧದಿಂದಲೇ ಸರ್ಕಾರ ಬೀಳಲಿದೆ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.