ಬೆಂಗಳೂರು, ಆ.27(Daijiworld News/SS): ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಮಾರಕ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಸನ್ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅನುಭವಿಸುತ್ತಿರುವ ಅವಮಾನ, ಅನ್ಯಾಯ, ಅಸಂತೋಷವನ್ನು ನೋಡುತ್ತಿದ್ದರೆ, ಅವರ ರಾಜಕೀಯ ಎದುರಾಳಿಯಾದ ನನ್ನಂತವನಲ್ಲಿಯೂ ಅವರ ಬಗ್ಗೆ ಅನುಕಂಪ ಮೂಡುವಂತಾಗಿದೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಂಪುಟ ರಚನೆ, ಖಾತೆ ಹಂಚಿಕೆಯ ಕಸರತ್ತುಗಳನ್ನು ಗಮನಿಸಿದರೆ ಜನಪ್ರತಿನಿಧಿಗಳ ದನಿ ಉಡುಗಿಹೋಗಿ ಸಂವಿಧಾನೇತರ ಶಕ್ತಿಗಳೇ ವಿಜೃಂಭಿಸಿರುತ್ತಿರುವ ಹಾಗೆ ಕಾಣಿಸುತ್ತಿದೆ. ಇದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಮಾರಕ ಎಂದು ಟೀಕಿಸಿದ್ದಾರೆ.