ಮೈಸೂರು, ಆ 27 (Daijiworld News/MSP):ಮೀಸಲಾತಿ ಕುರಿತು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡಿದ ಹೇಳಿಕೆ ಬಗ್ಗೆ ಬಿಜೆಪಿ ಸಂಸದ, ಹಿರಿಯ ರಾಜಕಾರಣಿ ವಿ. ಶ್ರೀನಿವಾಸ್ ಪ್ರಸಾದ್ ತೀವ್ರ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಭಾರತೀಯ ಜನತಾ ಪಕ್ಷದಲ್ಲಿ ಮತ್ತು ಆರ್ ಎಸ್ ಎಸ್ (ರಾಷ್ಟ್ರೀಯ ಸ್ವಯಂ ಸೇವಕ ಸಂಘ) ಪ್ರಸ್ತುತ ನಡೆಯುತ್ತಿರುವ ಒಂದಷ್ಟು ಬೆಳವಣಿಗೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಮೀಸಲಾತಿ ಬಗ್ಗೆ ಮೋಹನ್ ಭಾಗವತ್ ನೀಡಿದ ಹೇಳಿಕೆ ಹಾಗೂ ಬಿಜೆಪಿ ಪಕ್ಷದೊಳಗೆ ಅಧಿಕಾರಕ್ಕಾಗಿ ನಡೆಯುತ್ತಿರುವ ಮೇಲಾಟ ಹಾಗೂ ಒಳಜಗಳದ ಬಗ್ಗೆಯೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಆ.27 ರ ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಜಾತೀಯತೆ ಎನ್ನುವುದು ಎಲ್ಲಿಯವರೆಗೆ ಆಚರಣೆಯಲ್ಲಿರುತ್ತದೆಯೋ ಅಲ್ಲಿಯವರೆಗೂ ಮೀಸಲಾತಿ ಇರಲೇಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ನಡೆದ ಗ್ಯಾನ್ ಉತ್ಸವದಲ್ಲಿ ಮಾತನಾಡಿದ್ದ ಮೋಹನ್ ಭಾಗವತ್ ಅವರು, ಮೀಸಲಾತಿ ಬಗ್ಗೆ ಸೌಹಾರ್ದಯುತ ಚರ್ಚೆ ಅಗತ್ಯ. ಮೀಸಲಾತಿ ಪರ ಇರುವವರು ಮತ್ತು ವಿರೋಧಿಸುವವರ ನಡುವೆ ಸೌಹಾರ್ದಯುತ ವಾತಾವರಣದಲ್ಲಿ ಅರ್ಥಪೂರ್ಣ ಚರ್ಚೆ ನಡೆಯಬೇಕು ಎಂದು ಹೇಳಿದ್ದರು.