ನವದೆಹಲಿ, ಆ.27(Daijiworld News/SS): ಪ್ರಧಾನಿ ನರೇಂದ್ರ ಮೋದಿ ಅರುಣ್ ಜೇಟ್ಲಿಯವರ ನಿವಾಸಕ್ಕೆ ಭೇಟಿ ನೀಡಿದ್ದು, ದಿವಂಗತ ಮಾಜಿ ಹಣಕಾಸು ಸಚಿವ, ಬಿಜೆಪಿಯ ಹಿರಿಯ ಮುಖಂಡನಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕೆಲ ದಿನಗಳ ಹಿಂದೆ ಫ್ರಾನ್ಸ್-ಯುಎಇ-ಬಹ್ರೇನ್ಗೆ ಮೂರು ರಾಷ್ಟ್ರಗಳ ಪ್ರವಾಸದಲ್ಲಿದ್ದರು. ಹೀಗಾಗಿ ಜೇಟ್ಲಿಯವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಆದರೆ ವಿದೇಶ ಪ್ರವಾಸದಲ್ಲಿದ್ದರೂ ಪ್ರಧಾನಿ ಮೋದಿ ಜೇಟ್ಲಿಯ ಕುಟುಂಬದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಸಂತಾಪ ವ್ಯಕ್ತಪಡಿಸಿದ್ದರು.
ಇದೀಗ ಜಿ7 ಶೃಂಗಸಭೆ ಮುಗಿಸಿ ಭಾರತಕ್ಕೆ ಮರಳಿದ ಮೋದಿ ಅರುಣ್ ಜೇಟ್ಲಿಯವರ ನಿವಾಸಕ್ಕೆ ಭೇಟಿ ನೀಡಿದ್ದು, ಹಿರಿಯ ಮುಖಂಡನಿಗೆ ಗೌರವ ನಮನ ಸಲ್ಲಿಸಿದ್ದಾರೆ.
ಜೇಟ್ಲಿ ಜೂನ್ 2009 ರಿಂದ 2014 ರವರೆಗೆ ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿದ್ದರು. ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಜೇಟ್ಲಿ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವ, ರಕ್ಷಣಾ ಮತ್ತು ಮಾಹಿತಿ ಮತ್ತು ಪ್ರಸಾರ ಖಾತೆಗಳನ್ನು ಸಹ ಹೊಂದಿದ್ದರು. ಆಗಸ್ಟ್ 24 ರಂದು ಏಮ್ಸ್ ಆಸ್ಪತ್ರೆಯಲ್ಲಿ ಜೇಟ್ಲಿ ನಿಧನರಾದರು.