ನವದೆಹಲಿ, ಆ.27(Daijiworld News/SS): ಸಂಕಷ್ಟದಲ್ಲಿರುವ ಆರ್ಥಿಕತೆಯನ್ನು ಸರಿದಾರಿಗೆ ತರುವಲ್ಲಿ ದಿಕ್ಕು ತೋಚದೆ ಆರ್ಬಿಐನ ಮೀಸಲು ಹಣವನ್ನು ಕೇಂದ್ರ ಲೂಟಿ ಮಾಡಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ತಾವೇ ಸೃಷ್ಟಿಸಿದ ಆರ್ಥಿಕ ಅವಘಡಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪರಿಹಾರ ಕಂಡುಕೊಳ್ಳಲು ಅಸಹಾಯಕರಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಆರ್ಬಿಐನಿಂದ ಹೆಚ್ಚುವರಿ ಹಣವನ್ನು ಸರ್ಕಾರ ಲೂಟಿ ಮಾಡಿದೆ. ಸರ್ಕಾರದ ಕ್ರಮ ಹೇಗಿದೆ ಎಂದರೆ ಆಸ್ಪತ್ರೆಯಿಂದ ಬ್ಯಾಂಡ್-ಏಡ್ ಕಳವು ಮಾಡಿ ಗುಂಡೇಟಿನಿಂದ ಆದ ಗಾಯಕ್ಕೆ ಕಟ್ಟಿದಂತಾಗಿದೆ. ಸಂಕಷ್ಟದಲ್ಲಿರುವ ಆರ್ಥಿಕತೆಯನ್ನು ಸರಿದಾರಿಗೆ ತರುವಲ್ಲಿ ದಿಕ್ಕು ತೋಚದೆ ಆರ್ಬಿಐನ ಮೀಸಲು ಹಣವನ್ನು ಲೂಟಿ ಮಾಡಿದೆ ಎಂದು ದೂರಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿಂದ 1.76 ಕೇಂದ್ರ ಸರ್ಕಾರಕ್ಕೆ ಬ್ಯಾಂಕ್ನ ಹೆಚ್ಚುವರಿ ನಿಧಿ 1.76 ಲಕ್ಷ ರೂ. ವರ್ಗಾವಣೆ ಮಾಡಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್, ಆರ್ಬಿಐನಿಂದ ಕದಿಯುವುದರಿಂದ ಏನೂ ಪ್ರಯೋಜನವಾಗದು ಎಂದು ತಿಳಿಸಿದೆ.
ವಸತಿಯಿಂದ ಉತ್ಪಾದನೆಯವರೆಗೆ ದೇಶದ ಎಲ್ಲಾ ವಲಯಗಳಲ್ಲಿ ಆರ್ಥಿಕ ಕುಸಿತದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಆರ್ಬಿಐನಿಂದ ಭಾರಿ ದೊಡ್ಡ ಮೊತ್ತದ ಹಣವನ್ನು ಪಡೆದಿದೆ. ಆರ್ಬಿಐನ ಈ ರೀತಿಯ ಶೋಷಣೆ ದೇಶದ ಆರ್ಥಿಕತೆಯ ಮತ್ತಷ್ಟು ಕ್ಷೀಣಿಸಲು ದಾರಿ ಮಾಡಿಕೊಡಲಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.