ಬೆಳಗಾವಿ, ಆ 27 (Daijiworld News/MSP): ಇಡೀ ನಾಡು ತಲೆತಗ್ಗಿಸುವಂತೆ ಮಾಡಿದ್ದ ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಮಾಡಿದ್ದ ಮೂವರು ಬ್ಲೂ ಬಾಯ್ಸ್ ನಲ್ಲಿ ಒಬ್ಬರಾಗಿರುವ ವ್ಯಕ್ತಿಯನ್ನು ರಾಜ್ಯದ ಉಪಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಇಂತಹ ವ್ಯಕ್ತಿಯನ್ನು ಡಿಸಿಎಂ ಆಗಿ ಆಯ್ಕೆ ಮಾಡಿರುವ ಬಿಜೆಪಿ ಮುಖಂಡರುಗಳಿಗೆ ಮಾನ, ಮಾರ್ಯಾದೆ ಇದೆಯೇ ? ಎಂದು ಕಾಂಗ್ರೆಸ್ ಪಕ್ಷದ ಶಾಸಕಾಂಗ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.
ವಿಧಾನಸಭೆಯಲ್ಲಿ ಕುಳಿತು ಕೊಂಡು ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿದ್ದ ವ್ಯಕ್ತಿಯಿಂದ ಹಾಗೂ ಇವರನ್ನು ಒಳಗೊಂಡ ಸರ್ಕಾರದಿಂದ ರಾಜ್ಯದ ಜನ ಇನ್ನೇನು ನಿರೀಕ್ಷಿಸಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಬೆಳಗಾವಿ ಅಥಣಿಯಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಅವರು, ಈ ಸರ್ಕಾರ ಹೆಚ್ಚು ದಿನ ಆಳ್ವಿಕೆ ನಡೆಸಲ್ಲ. ಈಗಾಗಲೇ ಆಂತರಿಕ ಕಚ್ಚಾಟ ಪ್ರಾರಂಭವಾಗಿದೆ. ಸರ್ಕಾರದಲ್ಲಿ ಯಡಿಯೂರಪ್ಪ ಮಾತು ನಡೆಯುತ್ತಿಲ್ಲ. ಬಿಜೆಪಿಯಲ್ಲಿ ಆರ್ಎಸ್ಎಸ್ ನಾಯಕರ ಮಾತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಇದೇ ಕಾರಣಕ್ಕೆ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಅಶ್ವತ್ಧ ನಾರಾಯಣ್ ಇವರಂತಹ ಶಾಸಕರಿಗೆ ಲಾಭಾದಾಯಕ ಹುದ್ದೆಗಳು ದೊರಕಿದೆ.
ಸಿಎಂ ಯಡಿಯೂರಪ್ಪ ಹೇಳಿದ ನಾಯಕರಿಗೆ ಬಿಜೆಪಿ ಹೈಕಮಾಂಡ್ ಯಾವುದೇ ಪ್ರಮುಖ ಖಾತೆಯನ್ನು ನೀಡಿಲ್ಲ. ಚುನಾವಣೆಯಲ್ಲಿ ಸೋತಿರುವ ಲಕ್ಷ್ಮಣ ಸವದಿಯನ್ನು ಸಂಪುಟಕ್ಕೆ ಸೇರ್ಪಡೆ ಮಾಡಿದರೆ ಭಿನ್ನಮತ ಹೆಚ್ಚಾಗುತ್ತದೆ ಎಂಬ ಯಡಿಯೂರಪ್ಪ ಮಾತಿಗೂ ಮನ್ನಣೆ ನೀಡಿಲ್ಲ ಎಂದರು