ನವದೆಹಲಿ,ಆ 27 (Daijiworld News/RD): ಮಹಿಳೆಯರ ಆರೋಗ್ಯ, ಶುಚಿತ್ವ ವಿಚಾರದಲ್ಲಿ ವಿಶೇಷ ಕಾಳಜಿ ವಹಿಸಿದ ಕೇಂದ್ರ ಸರ್ಕಾರ, ಜನೌಷಧ ಕೇಂದ್ರಗಳಲ್ಲಿ ಇಂದಿನಿಂದ ಕೇವಲ 1 ರೂಪಾಯಿಗೆ ಸ್ಯಾನಿಟರಿ ಪ್ಯಾಡ್ಗಳನ್ನು ಒದಗಿಸಲು ಮುಂದಾಗಿದೆ.
ಈ ಹಿಂದೆ ಜನೌಷಧ ಕೇಂದ್ರಗಳಲ್ಲಿ 2.50 ರೂ.ಗೆ ಮಾರಲಾಗುತ್ತಿದ್ದ ಸ್ಯಾನಿಟರಿ ಪ್ಯಾಡ್ಗಳು, ಇಂದಿನಿಂದ ಕೇವಲ 1 ರೂ.ಗೆ ದೊರೆಯಲಿದ್ದು, ಇವು ಮಣ್ಣಿನಲ್ಲಿ ಕರಗಬಲ್ಲ(ಬಯೋಡಿಗ್ರೆಡೆಬಲ್) ‘ಸುವಿಧಾ’ ನ್ಯಾಪ್ಕಿನ್ಗಳು ಎಂದು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದ್ದಾರೆ.
ಈ ಹಿಂದೆ 4 ಸ್ಯಾನಿಟರಿ ಪ್ಯಾಡ್ಗಳುಳ್ಳ ಪ್ಯಾಕಿಗೆ 10 ರೂ. ಇತ್ತು. ಆದರೆ ಇಂದಿನಿಂದ ಅದೇ ಪ್ಯಾಡ್ಗಳ ಬೆಲೆ 4 ರೂ.ಗೆ ಇಳಿದಿದೆ. ಹೀಗೆ ದರದಲ್ಲಿ 60% ಕಡಿತ ಮಾಡುವ ಮೂಲಕ ಮೋದಿ ನೇತೃತ್ವದ ಸರ್ಕಾರವು 2019ರ ಚುನಾವಣೆ ವೇಳೆ ನೀಡಿದ್ದ ಭರವಸೆಯನ್ನು ಈಡೇರಿಸಿದೆ ಎಂದು ಸಚಿವರು ತಿಳಿಸಿದರು.
2018ರ ಮಾರ್ಚ್ನಲ್ಲಿ ಸುವಿಧಾ ನ್ಯಾಪ್ಕಿನ್ಸ್ ಯೋಜನೆಯನ್ನು ಘೋಷಿಸಲಾಗಿತ್ತು. ಅದೇ ವರ್ಷ ಮೇ ತಿಂಗಳಿನಿಂದ ಈ ಯೋಜನೆ ಜನೌಷಧ ಕೇಂದ್ರಗಳಲ್ಲಿ ಲಭ್ಯವಾಗುತ್ತಿತ್ತು. ಹಾಗಾಗಿ ಕಳೆದ 1 ವರ್ಷದ ಅವಧಿಯಲ್ಲಿ ಸುಮಾರು 5,500 ಜನೌಷಧ ಕೇಂದ್ರಗಳಲ್ಲಿ 2.2 ಕೋಟಿ ನ್ಯಾಪ್ಕಿನ್ಗಳು ಮಾರಾಟವಾಗಿವೆ ಎಂದು ವರದಿಯಾಗಿದೆ. ಈಗ ದರ ಇಳಿಕೆ ಮಾಡಿರುವುದರಿಂದ ಸುವಿಧಾ ನ್ಯಾಪ್ಕಿನ್ಸ್ ಮಾರಾಟ ಇನ್ನೂ ದುಪ್ಪಟ್ಟುಗೊಳ್ಳಲಿದೆ ಎಂದು ಮನ್ಸುಖ್ ಮಾಂಡವೀಯ ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನು ಮಾರುಕಟ್ಟೆಯಲ್ಲಿ ಒಂದು ನ್ಯಾಪ್ ಕಿನ್ ದರ ಸರಾಸರಿ 6 ರಿಂದ 8 ರೂ ದೊರೆಯಲಿದೆ ಎಂದರು.