ನವದೆಹಲಿ, ಆ 27 (DaijiworldNews/SM): ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳುವ ಮುನ್ನ ಕಾಂಗ್ರೆಸ್ ಮುಖಂಡರೇ ಎಚ್ಚರ. ತಪ್ಪಿದ್ದಲ್ಲಿ ದಂಡ ನಿಶ್ಚಿತ. ಇದಕ್ಕೆ ನಿದರ್ಶನವೊಂದು ನಡೆದಿದ್ದು, ಹಿರಿಯ ಮುಖಂಡ ಶಶಿ ತರೂರ್ ಅವರಿಗೆ ಸಂಕಷ್ಟ ಎದುರಾಗಿದೆ.
ಕಾಂಗ್ರೆಸ್ ಹಿರಿಯ ಮುಖಂಡ ಶಶಿ ತರೂರ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿ ಇದೀಗ ಪೇಚಿಗೆ ಸಿಲುಕಿದ್ದಾರೆ. ಪ್ರಧಾನಿಗಳನ್ನು ಹೊಗಲಿದ್ದಕ್ಕೆ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಈ ಸಂಬಂಧ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ.
ಈ ಹಿಂದೆ ಶಶಿ ತರೂರ್ ಅವರು ಟ್ವೀಟ್ ನಲ್ಲಿ 'ನರೇಂದ್ರ ಮೋದಿ ಏನಾದರೂ ಸರಿಯಾಗಿ ಮಾಡಿದರೆ ಅಥವಾ ಸರಿಯಾದ ಮಾತು ಹೇಳಿದರೆ ಅವರನ್ನು ಮೆಚ್ಚಬೇಕು ಎಂದು ನಾನು ಆರು ವರ್ಷಗಳಿಂದ ಮನವಿ ಮಾಡುತ್ತಿದ್ದೇನೆ. ಇದರಿಂದಾಗಿ ಅವರು ಏನಾದರೂ ತಪ್ಪು ಮಾಡಿದಾಗ ಅವರನ್ನು ಟೀಕಿಸಿದಾಗ ಅವರಿಗೆ ಅದನ್ನು ತಿದ್ದಿಕೊಳ್ಳಾಲು ಅವಕಾಶ ಸಿಗುತ್ತದೆ ಎಂದಿದ್ದ ಅವರು ಇತರ ವಿರೋಧ ಪಕ್ಷದವರು ಇದನ್ನು ಸ್ವಾಗತಿಸುವಂತೆ ತಿಳಿಸಿದ್ದರು.
ಇದು ಕೇರಳ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಅಲ್ಲದೆ ಅವರಿಗೆ ನೋಟಿಸ್ ನೀಡುವಂತೆ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಅಲ್ಲದೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳ ಕಾಂಗ್ರೆಸ್ ಅಧ್ಯಕ್ಷ ಮುಲ್ಲಾಪಲ್ಲಿ ರಾಮಚಂದ್ರನ್ ಅವರು, 'ಪಿಎಂ ಮೋದಿಯವರನ್ನು ಶ್ಲಾಘಿಸಿರುವ ವಿಷಯದ ಬಗ್ಗೆ ಶಶಿ ತರೂರ್ ಅವರಿಂದ ಸ್ಪಷ್ಟನೆ ಪಡೆಯುತ್ತೇವೆ. ಶಶಿ ತರೂರ್ ಸ್ಪಷ್ಟೀಕರಣದ ಬಳಿಕ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.