ಶ್ರೀನಗರ, ಆ.28(Daijiworld News/SS): ಜೈಷ್-ಎ-ಮೊಹಮ್ಮದ್ ಸಂಘಟನೆಯ ಉಗ್ರರು ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಅಟ್ಟಹಾಸಗೈದಿದ್ದಾರೆ.
ಬಾರಾಮೂಲ ಜಿಲ್ಲೆಯಲ್ಲಿ ಚೆಕ್ಪೋಸ್ಟ್ ಮೇಲೆ ದಾಳಿ ನಡೆಸಿದ್ದ ಓರ್ವ ಉಗ್ರನನ್ನು ಬಂಧಿಸಲಾಗಿದೆ. ಆತನಿಂದ ಎ.ಕೆ.47 ಹಾಗೂ ಪಿಸ್ತೂಲನ್ನು ವಶಕ್ಕೆ ಪಡೆಯಲಾಗಿದೆ ಎಂದು ಸೇನೆ ತಿಳಿಸಿದೆ.
ಜಮ್ಮು- ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಮತ್ತೆ ದುಷ್ಕೃತ್ಯಗಳಿಗೆ ಸಂಚು ರೂಪಿಸಿರುವ ಜೈಷ್-ಎ-ಮೊಹಮ್ಮದ್ ಸಂಘಟನೆಯ ಉಗ್ರರು ಪುಲ್ವಾಮಾದ ಅರಣ್ಯ ಪ್ರದೇಶದಲ್ಲಿ ವಾಸಿಸುವ ಅಲೆಮಾರಿ ಗುಜ್ಜರ್ ಸಮುದಾಯಕ್ಕೆ ಸೇರಿದ ಅಬ್ದುಲ್ ಖಾದೀರ್ ಕೊಹ್ಲಿ ಹಾಗೂ ಮನ್ಜೂರ್ ಅಹ್ಮದ್ ಎಂಬುವವರನ್ನು ಅಪಹರಿಸಿ, ಕೊಲೆ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಭೂಸೇನೆ ಮುಖ್ಯಸ್ಥ ಬಿಪಿನ್ ರಾವತ್, ಕಾಶ್ಮೀರದಲ್ಲಿ ಶಾಂತಿ ಕದಡಲು ಉಗ್ರ ಸಂಘಟನೆಗಳು ಯತ್ನಿಸುತ್ತಿದೆ. ಕಣಿವೆಯಲ್ಲಿ ಶಾಂತಿ ಇಲ್ಲ, ಜನರು ಸಂಕಷ್ಟದಲ್ಲಿದ್ದಾರೆ ಎಂದು ತೋರಿಸಿ ಅಂತಾರಾಷ್ಟ್ರೀಯ ವೇದಿಕೆಗಳು ಕಾಶ್ಮೀರ ವಿಚಾರದಲ್ಲಿ ಹಸ್ತಕ್ಷೇಪ ಮಾಡುವಂತೆ ಮಾಡಲು ಪಾಕಿಸ್ತಾನ ಈ ರೀತಿಯ ಕೃತ್ಯಗಳಿಗೆ ಕೈಹಾಕುತ್ತಿದೆ ಎಂದು ತಿಳಿಸಿದ್ದಾರೆ.
ಕಳೆದ ಆ.20ರಂದು ಬಾರಾಮೂಲ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ ವೇಳೆ ಓರ್ವ ಉಗ್ರನನ್ನು ಹೊಡೆದುರುಳಿಸಲಾಗಿದ್ದು, ಘಟನೆಯಲ್ಲಿ ಓರ್ವ ಎಸ್ಪಿಒ ಅಧಿಕಾರಿ ಮೃತಪಟ್ಟಿದ್ದರು.