ಬೆಂಗಳೂರು, ಆ.28(Daijiworld News/SS): ಉತ್ತರ ಕರ್ನಾಟಕ ಹಿಂದೆಂದೂ ಕಂಡು ಕೇಳರಿಯದ ಮಹಾ ಪ್ರವಾಹಕ್ಕೆ ಸಿಲುಕಿ ನಲುಗಿದೆ. ಭಾರೀ ಮಳೆ, ಮಹಾ ಪ್ರವಾಹ ಜನ ಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ಸಾವಿರಾರು ಜನರ ತಲೆ ಮೇಲಿದ್ದ ಸೂರು ನೆಲ ಕಂಡಿದ್ದರೆ, ಭವಿಷ್ಯದ ಕನಸಿಲ್ಲಿ ನುಚ್ಚುನೂರಾಗಿದೆ. ಈ ಹಿನ್ನಲೆ, ನಾಡಿನ ಜನತೆ ಸೇರಿದಂತೆ ರಾಜಕೀಯ ಪಕ್ಷಗಳು ನರೆ ಸಂತ್ರಸ್ತರ ಕಷ್ಟಕ್ಕೆ ಮಿಡಿಯುತ್ತಿದೆ.
ಸದ್ಯ ಭಾರೀ ಮಳೆ, ಪ್ರವಾಹದಿಂದ ಉತ್ತರ ಕರ್ನಾಟಕದಲ್ಲಿ ನಿಧಾನವಾಗಿ ಆರೋಗ್ಯ ಸಮಸ್ಯೆಗಳು ಉಲ್ಬಣಿಸುತ್ತಿದ್ದು, ಆನಾರೋಗ್ಯಕ್ಕೆ ಒಳಗಾದವವರಿಗೆ ಉಚಿತ ಚಿಕಿತ್ಸೆ ನೀಡುವ ಉದ್ದೇಶದಿಂದ ಜೆಡಿಎಸ್ "ಕುಮಾರ ರಕ್ಷಾ" ಎಂಬ ಆಂಬ್ಯುಲೆನ್ಸ್ ಅನ್ನು ಸಂತ್ರಸ್ತರ ನೆರವಿಗೆ ರವಾನಿಸಿದೆ.
ಕುಮಾರ ರಕ್ಷಾ ಆಂಬ್ಯುಲೆನ್ಸ್'ಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಜೆಡಿಎಸ್'ನ ಉಪಾಧ್ಯಕ್ಷರಾದ ಡಾ. ಬಿ.ಎಂ. ಉಮೇಶ್ ತನ್ನ ಸ್ವಂತ ಖರ್ಚಿನಲ್ಲಿ ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಮುಂದಾಗಿರುವುದು ಶ್ಲಾಘನೀಯ. ಉತ್ತರ ಕರ್ನಾಟಕದ ಜನರ ಸಹಾಯಕ್ಕೆ ನಿಂತಿರುವುದು ಉತ್ತಮ ಬೆಳವಣಿಗೆ. ಇಂತಹ ಸೇವಾ ಕಾರ್ಯ ನಿರಂತರವಾಗಿ ನಡೆಸಿಕೊಂಡು ಬಂದವರು ಉನ್ನತ ಸ್ಥಾನಕ್ಕೇರಲಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಉಪಾಧ್ಯಕ್ಷ ಉಮೇಶ್ಕುಮಾರ್ ಮಾತನಾಡಿ, ನಾಡಿನ ಎಲ್ಲೆಡೆ ಸಂಚರಿಸಲಿರುವ ಈ ಉಚಿತ ಮೊಬೈಲ್ ಆರೋಗ್ಯ ತಪಾಸಣಾ ವಾಹನದಲ್ಲಿ ಡಯಾಬಿಟಿಕ್ ರಕ್ತ ಪರೀಕ್ಷೆ, ಎಕ್ಸ್ ರೇ ಸೇರಿದಂತೆ ಹಲವು ಆರೋಗ್ಯ ಸೇವೆಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಬಡ ಜನರು ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಪಡೆಯಲು ಅನುಕೂಲವಾಗುವಂತಹ ಮೊಬೈಲ್ ವಾಹನಗಳ ಸೇವೆಯನ್ನು ಆರಂಭಿಸಿದ್ದೇವೆ. ಈ ಆರೋಗ್ಯ ತಪಾಸಣಾ ವಾಹನಗಳು ಮೊದಲ ಹಂತದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಚರಿಸಲಿವೆ. ಮುಂದಿನ ದಿನಗಳಲ್ಲಿ ರಾಜ್ಯದೆಲ್ಲೆಡೆ ಸೇವೆಯನ್ನು ವಿಸ್ತರಿಸುವ ಯೋಜನೆ ನಮ್ಮದಾಗಿದೆ ಎಂದು ಹೇಳಿದರು.
ಕುಮಾರ ರಕ್ಷಾ ವಾಹನದಲ್ಲಿ ನೆರೆಯಲ್ಲಿ ಕಂಗಾಲಾಗಿರುವ ಕುಟುಂಬಗಳಿಗೆ ಔಷಧಿ, ಅಗತ್ಯವಿರುವಂತಹ ಹೊದಿಗೆ, ಛತ್ರಿ, ಬ್ರೆಡ್ಡು, ಬಿಸ್ಕತ್ತು, ಊಟ, ತಿಂಡಿ, ಕುಡಿಯುವ ನೀರು, ಟಾರ್ಚು, ಚಪಾತಿ ಹಾಗೂ ಇನ್ನಿತರೆ ಅವಶ್ಯ ಸಾಮಗ್ರಿಗಳನ್ನು ಸಹ ಕಳುಹಿಸಿಕೊಡಲಾಗಿದೆ. ಈ ವಾಹನಗಳ ಜೊತೆ ಸುಮಾರು 15 ಕ್ಕೂ ಹೆಚ್ಚು ಸ್ವಯಂ ಪ್ರೇರಿತ ಕಾರ್ಯಕರ್ತರನ್ನು ಸೂಕ್ತವಾದ ಮಾರ್ಗದರ್ಶನ ನೀಡಿ ಸೇವೆಗೆ ಕಳುಹಿಸಿಕೊಡಲಾಗಿದೆ.