ನವದೆಹಲಿ, ಆ.28(Daijiworld News/SS): ಹೈಕಮಾಂಡ್ ನಿರ್ದೇಶನದಂತೆ ಅಳೆದು ತೂಗಿ ರಾಜ್ಯದಲ್ಲಿ ಸಂಪುಟ ರಚನೆ ಮಾಡಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಹಳಬರು ಮತ್ತು ಹೊಸಬರಿಗೆ ಸಾಮರ್ಥ್ಯ ನೋಡಿ ಸಂಪುಟದಲ್ಲಿ ಅವಕಾಶ ನೀಡಲಾಗಿದೆ ಎಂದು ಎಂದು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಆಗಿನ ಹಾಗೂ ಈಗಿನ ಪರಿಸ್ಥಿತಿ ಬೇರೆಯೇ ಇದೆ. ಈಗ ಎಲ್ಲವನ್ನೂ ಅಚ್ಚುಕಟ್ಟಾಗಿ ಮಾಡುವ ವ್ಯವಸ್ಥೆ ಬಂದಿದೆ. ಭವಿಷ್ಯದ ದೃಷ್ಟಿಯಿಂದ ಹಳಬರು ಮತ್ತು ಹೊಸಬರಿಗೆ ಸಾಮರ್ಥ್ಯ ನೋಡಿ ಸಂಪುಟದಲ್ಲಿ ಅವಕಾಶ ನೀಡಲಾಗಿದೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇದ್ದಾಗ ಆದಂತಹ ಗೊಂದಲಗಳಿಗೆ ಈ ಭಾರಿ ಆಸ್ಪದವಿಲ್ಲ ಎಂದು ಹೇಳಿದ್ದಾರೆ.
ಹೈಕಮಾಂಡ್ ನಿರ್ದೇಶನದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಳೆದು ತೂಗಿ ಸಚಿವ ಸಂಪುಟ ರಚನೆ ಮಾಡಿ ಖಾತೆಯನ್ನು ಹಂಚಿಕೆ ಮಾಡಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಬಹಳಷ್ಟು ಜನ ಸಚಿವ ಸ್ಥಾನದ ಆಕಾಂಕ್ಷಿಗಳಿದ್ದಾರೆ. ಆದರೆ, ಯಾರನ್ನು ಸಚಿವರನ್ನಾಗಿ ಆಯ್ಕೆ ಮಾಡಬೇಕು ಎಂಬುದು ಸಿಎಂ ಯಡಿಯೂರಪ್ಪ ವಿವೇಚನೆಗೆ ಬಿಟ್ಟದ್ದು. ಈ ಸಚಿವ ಸಂಪುಟ ಹಳೆಯ ಬೇರು ಹೊಸ ಚಿಗುರಿನಂತಿದೆ ಎಂದು ತಿಳಿಸಿದರು.
ಸಂಪುಟ ರಚನೆಯಲ್ಲಿ ದಿನ ಒಂದೆರಡು ಹೆಚ್ಚು ಕಡಿಮೆ ಆದರೂ ಪರವಾಗಿಲ್ಲ, ಎಲ್ಲವೂ ಸರಿಯಾಗಿ ಆಗಬೇಕಷ್ಟೆ. ಹಿಂದೆ ನನ್ನನ್ನು ರೈಲ್ವೆ ಸಚಿವ ಸ್ಥಾನದಿಂದ ಬದಲಿಸಿದ್ದರು. ನನಗಿಂತಲೂ ಸಮರ್ಥರಿದ್ದ ಕಾರಣಕ್ಕೆ ಬೇರೆಯವರಿಗೆ ಅವಕಾಶ ಕೊಟ್ಟರು. ಅದೇ ರೀತಿ ರಾಜ್ಯ ಸಚಿವ ಸಂಪುಟದಲ್ಲೂ ಸಾಮರ್ಥ್ಯ ನೋಡಿ ಅವಕಾಶ ನೀಡಲಾಗುತ್ತದೆ ಎಂದು ಹೇಳಿದರು.