ಬೆಂಗಳೂರು, ಜೂ. 03 (DaijiworldNews/AK): ಕರ್ನಾಟಕದ ನೂತನ ಸಿಎಂ ಆಗಿ ಇಂದು ಸಂಜೆ ಪ್ರಮಾಣವಚನ ಹಿನ್ನೆಲೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳ ಮನೆಗಳಿಗೆ ಖುದ್ದಾಗಿ ತೆರಳಿ ಡಿ.ಕೆ. ಶಿವಕುಮಾರ್ ಆಹ್ವಾನ ನೀಡಿದ್ದಾರೆ. ಸಂಜೆ 4 ಗಂಟೆ 05 ನಿಮಿಷಕ್ಕೆ ನಡೆಯಲಿರುವ ಪದಗ್ರಹಣಕ್ಕೆ ಆಗಮಿಸುವಂತೆ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಪ್ರಧಾನಿ ದೇವೇಗೌಡರನ್ನು ಡಿಕೆಶಿ ಆಮಂತ್ರಿಸಿದ್ದಾರೆ.


ಮೊದಲು ಸಿದ್ದರಾಮಯ್ಯ ನಿವಾಸಕ್ಕೆ ನಿಯೋಜಿತ ಸಿಎಂ ತೆರಳಿದ್ದು, ಈ ವೇಳೆ ಪರಮೇಶ್ವರ್ ಅವರ ಜೊತೆ ಉಪಸ್ಥಿತರಿದ್ದರು. ಬೆಂಗಳೂರು, ಡಾಲರ್ಸ್ ಕಾಲೋನಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನೆಗೂ ಡಿಕೆಶಿ ತೆರಳಿದ್ದು, ಈ ವೇಳೆ ಮನೆಯಿಂದ ಹೊರಬಂದು ನಿಯೋಜಿತ ಸಿಎಂರನ್ನು ಬಿಎಸ್ವೈ ಆಲಂಗಿಸಿ ಸ್ವಾಗತಿಸಿದ್ದಾರೆ. ಬಳಿಕ ಮನೆಯ ದೇವರ ಕೋಣೆಗೆ ತೆರಳಿ ಡಿಕೆಶಿ ನಮಸ್ಕರಿಸಿದ್ದು, ಈ ವೇಳೆ ಶಾಲು ಹೊದಿಸಿ ಶಿವಕುಮಾರ್ ಅವರನ್ನು ಯಡಿಯೂರಪ್ಪ ಅಭಿನಂದಿಸಿದ್ದಾರೆ.
ಇನ್ನು ರಾಜಕೀಯ ವೈರತ್ವ ಮರೆತು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ನಿವಾಸಕ್ಕೂ ತೆರಳಿ ಅವರನ್ನು ಕಾರ್ಯಕ್ರಮಕ್ಕೆ ಡಿಕೆಶಿ ಆಹ್ವಾನಿಸಿದ್ದಾರೆ. ಈ ವೇಳೆ ದೇವೇಗೌಡರ ಕಾಲಿಗೆ ಶಿವಕುಮಾರ್ ನಮಿಸಿದ್ದು, ನಿಯೋಜಿತ ಸಿಎಂರನ್ನು ಹೆಚ್ಡಿಡಿ ಈ ವೇಳೆ ಅಭಿನಂದಿಸಿದ್ದಾರೆ.
ಬಳಿಕ ಮಾತನಾಡಿದ ಡಿಕೆಶಿ, ದೇವೇಗೌಡರು ಮತ್ತು ಯಡಿಯೂರಪ್ಪ ರಾಜ್ಯಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ ಸೇವೆ ಸಲ್ಲಿಸಿರುವ ಬೇರೆ ಮುಖ್ಯಮಂತ್ರಿಗಳನ್ನೂ ಸಹ ಭೇಟಿ ಮಾಡುತ್ತೇನೆ. ಹೆಚ್.ಡಿ.ದೇವೇಗೌಡರು ನನಗೆ ಹಲವು ಸಲಹೆ ನೀಡಿದ್ದಾರೆ. ನನ್ನ ತಾಳ್ಮೆಯನ್ನೂ ಸಹ ಮೆಚ್ಚಿಕೊಂಡಿದ್ದಾರೆ. ರಾಜ್ಯಕ್ಕೆ ಒಳ್ಳೆಯದು ಮಾಡುತ್ತೇನೆ ಎಂದು ಅವರಿಗೆ ನಂಬಿಕೆ. ಮುಂದೆಯೂ ಸಹ ಬಂದು ಅವರ ಮಾರ್ಗದರ್ಶನ ಪಡೆಯುವೆ ಎಂದರು.