ನವದೆಹಲಿ, ಜೂ. 03 (DaijiworldNews/AA): ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ದೇಶದ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ರಕ್ಷಿಸಲು ಸುಮಾರು 12 ಬಿಲಿಯನ್ ಯುಎಸ್ ಡಾಲರ್ (ಸುಮಾರು 1 ಲಕ್ಷ ಕೋಟಿಗೂ ಅಧಿಕ) ಮೌಲ್ಯದ ಚಿನ್ನವನ್ನು ಮಾರಾಟ ಮಾಡಿದೆ ಎಂಬ ಮಾಧ್ಯಮಗಳ ವರದಿಯನ್ನು ಕೇಂದ್ರ ಸರ್ಕಾರ ಮತ್ತು ಆರ್ಬಿಐ ಅಧಿಕೃತವಾಗಿ ತಿರಸ್ಕರಿಸಿವೆ.

ಇತ್ತೀಚೆಗೆ ಪ್ರಕಟವಾದ ವರದಿಯೊಂದರಲ್ಲಿ, ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯಿಂದ ರೂಪಾಯಿ ಮೌಲ್ಯದ ಕುಸಿತವನ್ನು ತಡೆಯಲು ಆರ್ಬಿಐ ಮೇ 22 ಕ್ಕೆ ಕೊನೆಗೊಂಡ ಎರಡು ವಾರಗಳಲ್ಲಿ ಭಾರಿ ಪ್ರಮಾಣದ ಚಿನ್ನವನ್ನು ಮಾರಾಟ ಮಾಡಿರಬಹುದು ಎಂದು ಅಂದಾಜಿಸಿತ್ತು.
ಮಾಧ್ಯಮಗಳಲ್ಲಿ ಈ ಸುದ್ದಿ ಹರಿದಾಡುತ್ತಿದ್ದಂತೆ ಎಚ್ಚೆತ್ತ ಕೇಂದ್ರ ಸರ್ಕಾರ ಫ್ಯಾಕ್ಟ್-ಚೆಕ್ ನಡೆಸಿ, ಈ ವರದಿಯನ್ನು ಸುಳ್ಳು ಎಂದು ಘೋಷಿಸಿದೆ. ಈ ವರದಿಗಳು ಸಂಪೂರ್ಣವಾಗಿ ಸುಳ್ಳು ಎಂದು ಸ್ಪಷ್ಟನೆ ನೀಡಿರುವ ಆರ್ಬಿಐ, ದೇಶದ ಭೌತಿಕ ಚಿನ್ನದ ದಾಸ್ತಾನು 880.52 ಮೆಟ್ರಿಕ್ ಟನ್ಗಳಷ್ಟು ಯಾವುದೇ ಬದಲಾವಣೆಯಿಲ್ಲದೆ ಸುರಕ್ಷಿತವಾಗಿದೆ ಎಂದು ತಿಳಿಸಿದೆ.
ಆರ್ಬಿಐ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯಲ್ಲಿ, ಭಾರತದ ಒಟ್ಟು ಭೌತಿಕ ಚಿನ್ನದ ದಾಸ್ತಾನು ಪ್ರಸ್ತುತ 880.52 ಮೆಟ್ರಿಕ್ ಟನ್ಗಳಷ್ಟೇ ಇದ್ದು, ಅದರಲ್ಲಿ ಯಾವುದೇ ಕಡಿತವಾಗಿಲ್ಲ. ಭಾರತದ ಒಟ್ಟು ವಿದೇಶಿ ವಿನಿಮಯ ಮೀಸಲು ನಿಧಿಯಲ್ಲಿ ಚಿನ್ನದ ಪಾಲು ಸೆಪ್ಟೆಂಬರ್ 2025 ರ ಕೊನೆಯಲ್ಲಿ ಶೇ. 13.92 ರಷ್ಟಿತ್ತು. ಅದು ಮಾರ್ಚ್ 31, 2026 ರ ವೇಳೆಗೆ ಶೇ. 16.70 ಕ್ಕೆ ಮತ್ತು ಮೇ 22, 2026 ರ ವೇಳೆಗೆ ಶೇ. 16.85 ಕ್ಕೆ ಏರಿಕೆಯಾಗಿದೆ. ಆರ್ಬಿಐನ 2025-26ರ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, ಹಿಂದಿನ ವರ್ಷಕ್ಕೆ (878.58 ಮೆಟ್ರಿಕ್ ಟನ್) ಹೋಲಿಸಿದರೆ ಈ ಆರ್ಥಿಕ ವರ್ಷದಲ್ಲಿ ಚಿನ್ನದ ದಾಸ್ತಾನು 0.94 ಮೆಟ್ರಿಕ್ ಟನ್ನಷ್ಟು ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಿಲ್ಲ ಎಂದು ಹೇಳಿದೆ.