ಬೆಂಗಳೂರು, ಆ 28 (DaijiworldNews/SM): ರಾಜ್ಯದಲ್ಲಿ ಗೊಂದಲಕ್ಕೆ ಕಾರಣವಾಗಿರುವ ಶಿಕ್ಷಕರ ವರ್ಗಾವಣೆ ವಿಚಾರಕ್ಕೆ ತಾತ್ಕಾಲಿಕೆ ತಡೆ ಸಿಕ್ಕಿದೆ. ಶಿಕ್ಷಕರ ವರ್ಗಾವಣೆ ಸಂಬಂಧಿಸಿದಂತೆ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿರುವ ಗೊಂದಲ ನಿವಾರಣೆಗೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ವರ್ಗಾವಣೆಗೆ ತಡೆ ನೀಡಿದ್ದಾರೆ.
ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ಕೂಡ ನೀಡಲಾಗಿದೆ. ಶಿಕ್ಷಕರ ಕಡ್ಡಾಯ ವರ್ಗಾವಣೆ ಕುರಿತಂತೆ ಪ್ರಮುಖವಾಗಿ ಶಿಕ್ಷಕಿಯರು ಮನವಿಗಳನ್ನು ಸಲ್ಲಿಸಿದ್ದಾರೆ. ಹಾಗೂ ವರ್ಗಾವಣೆಯಿಂದ ತಮಗೆ ಎದುರಾಗುವ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ.
ಅಲ್ಲದೆ ಕೆಲವು ನ್ಯಾಯಯುತ ಪ್ರಸ್ತಾವನೆಗಳನ್ನು ತಮ್ಮ ಮುಂದೆ ಇರಿಸಿದ್ದಾರೆ. ವರ್ಗಾವಣೆ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದಿರುವ ಅವರು, ಇದರಲ್ಲಿರುವ ಕೆಲವೊಂದು ದೋಷಗಳನ್ನು ಸರಕಾರದ ಗಮನಕ್ಕೆ ತಂದಿದ್ದಾರೆ. ಹಾಗೂ ಗೊಂದಲ ನಿವಾರಿಸಿ ಅನುಕೂಲಕರ ನಿರ್ಧಾರ ಕೈಗೊಳ್ಳುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
ಅದರಂತೆ ಗೊಂದಲಗಳನ್ನು ನಿವಾರಿಸಿ, ಎಲ್ಲರಿಗೂ ಅನುಕೂಲವಾಗುವ ರೀತಿಯ ವ್ಯವಸ್ಥೆ ಕಲ್ಪಿಸಲು ಸರಕಾರ ಚಿಂತನೆ ನಡೆಸಿದೆ. ಯಾರೂ ಕೂಡ ಆತಂಕಪಡುವ ಅಗತ್ಯವಿಲ್ಲ. ಎಲ್ಲರಿಗೂ ಅನುಕೂಲಕರ ನಿರ್ಧಾರವನ್ನೇ ಸರಕಾರ ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.