ಬಾಗಲಕೋಟೆ, ಆ 28 (DaijiworldNews/SM): ಮಾಜಿ ಸಿಎಂ ಸಿದ್ದರಾಮಯ್ಯ ಪರ ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ ಬ್ಯಾಟ್ ಬೀಸಿದ್ದಾರೆ. ಸಿದ್ದರಾಮಯ್ಯನಂತಹ ನಾಯಕ ಮತ್ತೊಬ್ಬರಿಲ್ಲ ಎಂದು ವರ್ಣಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರದಲ್ಲಿ ಸಾಮಾಜಿಕ ನ್ಯಾಯವಿತ್ತು. ಎಲ್ಲ ಸಮುದಾಯದವರೂ ಸಚಿವರಾಗಿದ್ದರು. ಎಲ್ಲಾ ಸಮುದಾಯವನ್ನು ಸಮಾನರಾಗಿ ಕಾಣುತ್ತಿದ್ದರು ಎಂದಿದ್ದಾರೆ. ಅಲ್ಲದೆ ಮೈತ್ರಿ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣ ಎಂದು ಕುಮಾರಸ್ವಾಮಿ ಮತ್ತು ದೇವೇಗೌಡರು ಆರೋಪಿಸುತ್ತಿದ್ದಾರೆ. ಆದರೆ ಇವರ ಆರೋಪ ಸತ್ಯಕ್ಕೆ ದೂರವಾದುದು. ದೇವೇಗೌಡರ ಕುಟುಂಬ ಮತ್ತೊಮ್ಮೆ ಹುಟ್ಟಿ ಬಂದರೂ, ಸಿದ್ದರಾಮಯ್ಯ ಹೆಸರು ಕೆಡಿಸಲು ಸಾಧ್ಯವಿಲ್ಲ ಎಂದು ಶ್ರೀಗಳು ಗುಡುಗಿದ್ದಾರೆ.
ಸಿದ್ದರಾಮಯ್ಯ ಮತ್ತೊಮ್ಮೆ ಈ ರಾಜ್ಯದ ಮುಖ್ಯಮಂತ್ರಿಯಾದರೆ ತುಂಬಾ ಖುಷಿಯ ವಿಚಾರವಾಗುತ್ತದೆ. ಬಸವಣ್ಣನವರ ಅನುಭವ ಮಂಟಪದಂತೆ ಅವರು ಸಚಿವ ಸಂಪುಟ ರಚಿಸಿದ್ದರು. ಆದರೆ, ಸದ್ಯ ಆಡಳಿತದಲ್ಲಿರುವ ಬಿಜೆಪಿ ಸರಕಾರದ ಬಗ್ಗೆ ನೋ ಕಮೆಂಟ್ಸ್ ಎಂದಿದ್ದಾರೆ.
ದೇವೇಗೌಡ ಹಾಗೂ ಅವರ ಕುಟುಂಬ ಸಿದ್ದರಾಮಯ್ಯ ಮೇಲೆ ಎಷ್ಟೇ ಆರೋಪಗಳನ್ನು ಮಾಡಿದರೂ ಅವರ ವರ್ಚಸ್ಸು ಬದಲಾಗದು ಎಂದಿದ್ದಾರೆ. ಮಾಜಿ ಪ್ರಧಾನಿಗಳಾಗಿರುವ ಕಾರಣ ದೇವೇಗೌಡರ ಮೇಲೆ ಗೌರವವಿದೆ. ಆದರೆ, ಅವರು ಮನ ಬಂದಂತೆ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.