ಬೆಂಗಳೂರು, ಆ.29(Daijiworld News/SS): ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಜನಪರ ಯೋಜನೆಗಳನ್ನು ಬಿಜೆಪಿ ಸರ್ಕಾರಕ್ಕೆ ರದ್ದುಗೊಳಿಸಲು ಬಿಡುವುದಿಲ್ಲ ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ್ದೇ ಇರಲೀ ಅಥವಾ ಸಿದ್ದರಾಮಯ್ಯ ಅವರ ಸರ್ಕಾರದ ಕಾರ್ಯಕ್ರಮಗಳೇ ಇರಲೀ ಯಾವುದನ್ನೂ ರದ್ದು ಮಾಡಬಾರದು. ಒಂದು ವೇಳೆ ಬಿಜೆಪಿ ಸರ್ಕಾರ ಯೋಜನೆಗಳನ್ನು ರದ್ದು ಮಾಡಲು ಹೋದಲ್ಲಿ ಕಾಂಗ್ರೆಸ್ನ ಶಾಸಕರ ಜೊತೆ ಜೆಡಿಎಸ್ ನ 34 ಶಾಸಕರೂ ಸಹ ಹೋರಾಟ ಮಾಡಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಮೈತ್ರಿ ಮುಂದುವರಿಯುವುದು ಬಿಡುವುದು ಹೈಕಮಾಂಡ್'ಗೆ ಬಿಟ್ಟ ವಿಚಾರ. ಆದರೆ ಮೈತ್ರಿ ಸರ್ಕಾರದಲ್ಲಿನ ಕಾರ್ಯಕ್ರಮವನ್ನು ನಿಲ್ಲಿಸಲು ಈ ಸರ್ಕಾರ ಮುಂದಾದರೆ ಅದರ ವಿರೋಧ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಜನಪರ ಯೋಜನೆಗಳನ್ನು ಬಿಜೆಪಿ ಸರ್ಕಾರ ರದ್ದುಗೊಳಿಸಲು ಬಿಡುವುದಿಲ್ಲ ಎಂದು ಹೇಳಿದರು
ಹಣೆಬರಹದಲ್ಲಿ ಬರೆದಿರುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಹಣೆಬರಹದಲ್ಲಿ ಬರೆದಂತೆಯೇ ಎಲ್ಲವೂ ನಡೆಯುತ್ತದೆ. ಹಣೆಬರಹದಲ್ಲಿ ನಂಬಿಕೆ ಇಟ್ಟುಕೊಂಡು ಬದುಕುತ್ತಿದ್ದೇವೆ. ವಿರೋಧ ಪಕ್ಷದ ನಾಯಕರ ಸ್ಥಾನದ ಬಗ್ಗೆ ಪಕ್ಷದಲ್ಲಿ ಇನ್ನೂ ಯಾವುದೇ ಸ್ಪಷ್ಟ ತೀರ್ಮಾನವಾಗಿಲ್ಲ. ಪ್ರತಿಪಕ್ಷ ನಾಯಕನಾಗುವ ತರಾತುರಿಯಲ್ಲಿಯೂ ತಾವು ಇಲ್ಲ. ಚುನಾವಣೆಯಲ್ಲಿ ಸೋತವರೇ ಸಚಿವರು, ಉಪಮುಖ್ಯಮಂತ್ರಿಗಳಾಗಿದ್ದಾರೆ. ಇಂತಹ ಗ್ರಹಚಾರ ತಮಗಿಲ್ಲ ಎಂದು ಹೇಳಿದರು.
ತಾವು ಯಾವ ಸ್ಥಾನದ ಆಕಾಂಕ್ಷಿಯೂ ಅಲ್ಲ. ಮಾಧ್ಯಮಗಳು ಹೇಳುವಂತೆ ತಾವು ಎಲ್ಲಿಗೂ ಲಾಬಿಮಾಡಲು ಹೋಗಿಲ್ಲ. ಯಾವುದನ್ನೂ ಕಾಡಿಬೇಡಿ ಪಡೆಯಲು ಸಾಧ್ಯವಿಲ್ಲ. ಲಾಬಿ ಮಾಡುವ, ಸ್ವವಿವರ ಕೊಡುವ ಅಗತ್ಯವೂ ಇಲ್ಲ. ಪಕ್ಷ ಹಾಗೂ ಗಾಂಧಿ ಕುಟುಂಬದ ಮೇಲೆ ನಂಬಿಕೆ ಇರುವ ತಮಗೆ ಹೈಕಮಾಂಡ್ ಯಾವುದೇ ಹುದ್ದೆಯನ್ನೂ ಕೊಟ್ಟರೂ ಅದನ್ನು ಪ್ರಸಾದ ಎಂದು ಸ್ವೀಕರಿಸುವುದಾಗಿ ಹೇಳಿದ್ದಾರೆ.
ನನ್ನ ಕೆಲ ಹೇಳಿಕೆಗಳನ್ನು ತಿರುಚಲಾಗಿದೆ. ವಿರೋಧ ಪಕ್ಷದ ನಾಯಕರ ವಿರುದ್ಧ ಮಾತನಾಡುತ್ತೇನೆಯೇ ಹೊರತು, ನಮ್ಮ ಪಕ್ಷದ ನಾಯಕರ ಬಗ್ಗೆ ನಾನು ಎಂದಿಗೂ ಮಾತನಾಡುವುದಿಲ್ಲ. ಯಾವುದೇ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಸ್ವಪಕ್ಷದ ನಾಯಕರ ವಿರುದ್ಧ ಯಾವುದೇ ಕಾರಣಕ್ಕೂ ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಇದ್ದಾರೆ. ಅವರ ಕೆಲಸ ಅವರು ಮಾಡುತ್ತಿದ್ದಾರೆ. ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ. ಮಾತಿಗೆ ತಪ್ಪಿ ನಡೆದುಕೊಂಡು, ಆತುರಾತುರದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿರುವ ಯಡಿಯೂರಪ್ಪ ಅವರ ಸರ್ಕಾರದ ವೈಫಲ್ಯಗಳ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.