ನವದೆಹಲಿ, ಆ.29(Daijiworld News/SS): ಭಾರತದ ಮಹಾತ್ವಾಕಾಂಕ್ಷೆಯ ಚಂದ್ರಯಾನ-2 ಗಗನನೌಕೆ ನೂರಾರು ಕನಸುಗಳನ್ನು ಹೊತ್ತು ನಭಕ್ಕೆ ಜಿಗಿದಿದೆ. ಇದೀಗ ಚಂದ್ರಯಾನ-2 ಗಗನನೌಕೆಯ ಚಂದ್ರನ ಮೂರನೇ ಕಕ್ಷೆ ಬದಲಾವಣೆ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.
ಆ.28ರ ಬೆಳಗ್ಗೆ 9.04ರ ಸಮಯಕ್ಕೆ ನೌಕೆಯಲ್ಲಿರುವ ಇಂಜಿನ್ನ್ನು 1,190 ಸೆಕೆಂಡುಗಳ ಕಾಲ ದಹಿಸುವ ಮೂಲಕ ಚಂದ್ರನ ದ್ವಿತೀಯ ಕಕ್ಷೆಯಿಂದ ತೃತೀಯ ಕಕ್ಷೆಗೆ ತಲುಪಿಸಲಾಗಿದೆ. ಚಂದ್ರಯಾನ-2ರ ಎಲ್ಲ ಯಂತ್ರಗಳು ಸಹಜ ಸ್ಥಿತಿಯಲ್ಲಿದ್ದು, ಮುಂದಿನ ಕಕ್ಷೆ ಬದಲಾವಣೆ ಪ್ರಕ್ರಿಯೆ ಆ.30ರ ಸಂಜೆ 6 ರಿಂದ 7 ಗಂಟೆಯೊಳಗೆ ನಡೆಸಲಾಗುತ್ತದೆ ಎಂದು ಇಸ್ರೊ ತಿಳಿಸಿದೆ.
ಕಳೆದ ಆ.20ರಂದು ಚಂದ್ರಯಾನ-2ನ್ನು ಚಂದ್ರನ ಮೊದಲ ಕಕ್ಷೆಗೆ ಯಶಸ್ವಿಯಾಗಿ ಸೇರ್ಪಡೆ ಮಾಡಲಾಗಿತ್ತು. ಸೆ.1 ರಂದು ಕೊನೆಯ ಕಕ್ಷೆ ಬದಲಾವಣೆ ಕಾರ್ಯ ನಡೆಯಲಿದೆ. ಇನ್ನೆರಡು ಕಕ್ಷೆ ಬದಲಾವಣೆ ಬಳಿಕ ಇಸ್ರೋ ಅಂದಾಜಿನ ಪ್ರಕಾರ ಸೆ. 7ರ ಮಧ್ಯರಾತ್ರಿ 1.55ರ ಸುಮಾರಿಗೆ ಚಂದ್ರಯಾನ-2 ಚಂದ್ರನ ಮೇಲ್ಮೈ ಅಂಗಳ ಸ್ಪರ್ಶಿಸಲಿದೆ.