ಮೈಸೂರು, ಆ.29(Daijiworld News/SS): ನಾಡಹಬ್ಬ ಮೈಸೂರು ದಸರಾ ಸಮೀಪಿಸುತ್ತಿದೆ. ಈ ಹಿನ್ನಲೆ ಅರಮನೆಯಲ್ಲಿ ಭಾರೀ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯಲ್ಲಿ ಭಾಗವಹಿಸಲಿರುವ ಮೊದಲ ತಂಡದ 6 ಆನೆಗಳು ತಾಲೀಮು ಆರಂಭಿಸಿದೆ.
ಸದ್ಯ ಮೈಸೂರಿನ ಅರಮನೆ ಆವರಣದಲ್ಲಿರುವ ಕೋಡಿ ಸೋಮೇಶ್ವರಸ್ವಾಮಿ ದೇವಾಲಯದ ಬಳಿ ಬೀಡು ಬಿಟ್ಟಿರುವ ಗಜಪಡೆಗೆ ಕಬ್ಬು, ಬೆಲ್ಲ ಕೊಟ್ಟು ಪೂಜೆ ಸಲ್ಲಿಸುವ ಮೂಲಕ ತಾಲೀಮಿಗೆ ಚಾಲನೆ ನೀಡಲಾಗಿದೆ.
ಮೈಸೂರು ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಗಜಪಡೆಯ ಕ್ಯಾಪ್ಟನ್ ಅರ್ಜುನನ ನೇತೃತ್ವದಲ್ಲಿ ಅಭಿಮನ್ಯು, ಧನಂಜಯ, ವಿಜಯ, ವರಲಕ್ಷ್ಮೀ, ಮೊದಲ ಬಾರಿಗೆ ದಸರಾದಲ್ಲಿ ಪಾಲ್ಗೊಳ್ಳುತ್ತಿರುವ ಈಶ್ವರ ಆನೆ ತಾಲೀಮಿನಲ್ಲಿ ಪಾಲ್ಗೊಂಡಿದೆ.
ಈಗಾಗಲೇ ದೇವರಾಜ ಮೊಹಲ್ಲಾದ ಸಾಯಿರಾಮ್ & ಕೊ ಎಲೆಕ್ಟ್ರಾನಿಕ್ ತೂಕ ಮಾಪನ ಕೇಂದ್ರದಲ್ಲಿ ಗಜಪಡೆಯ ತೂಕ ಪರಿಶೀಲನೆ ಮಾಡಲಾಗಿದೆ. ಗಜಪಡೆಯ ಕ್ಯಾಪ್ಟನ್ ಅರ್ಜುನ- 5,800 ಕೆ.ಜಿ ಇದ್ದರೆ, ವರಲಕ್ಷ್ಮಿ- 3,510 ಕೆ.ಜಿ, ಈಶ್ವರ- 3,995 ಕೆ.ಜಿ, ಧನಂಜಯ- 4,460 ಕೆ.ಜಿ, ವಿಜಯ- 2,825 ಕೆ.ಜಿ ಹಾಗೂ ಅಭಿಮನ್ಯು- 5,145 ಕೆ.ಜಿ ಇದೆ.
ಸತತ 13 ಬಾರಿ ಅಂಬಾರಿ ಹೊತ್ತ ಬಲರಾಮ ಆನೆ ಪ್ರಥಮ ಬಾರಿಗೆ 2ನೇ ತಂಡದಲ್ಲಿ ನಗರಕ್ಕೆ ಆಗಮಿಸುತ್ತಿದೆ. ಬಲರಾಮಗೆ ಸಾಕಷ್ಟು ವಯಸ್ಸಾಗಿರುವುದರಿಂದ ಹೆಚ್ಚಿನ ವಿಶ್ರಾಂತಿ ನೀಡಲಾಗುತ್ತಿದೆ. ಬಲರಾಮ ನೇತೃತ್ವದ ಎರಡನೇ ತಂಡ ಸೆಪ್ಟೆಂಬರ್ ಮೊದಲ ವಾರದಲ್ಲಿ ನಗರಕ್ಕೆ ಬರಲಿದೆ ಎಂದು ತಿಳಿದುಬಂದಿದೆ.