ಹೊಸದಿಲ್ಲಿ, ಆ.29(Daijiworld News/SS): ಸಕ್ಕರೆ ರಫ್ತಿಗಾಗಿ ಕಬ್ಬು ಬೆಳಗಾರರಿಗೆ ಸಬ್ಸಿಡಿ ನೀಡುವುದಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದ್ದು, ಸಕ್ಕರೆ ರಫ್ತಿಗಾಗಿ ಕಬ್ಬು ಬೆಳೆಗಾರರಿಗೆ ಸಬ್ಸಿಡಿ ನೀಡಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಸಂಪುಟ ಸಭೆಯ ನಂತರ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಈ ಕುರಿತು ಮಾಹಿತಿ ನೀಡಿದ್ದಾರೆ. ಸಂಕಷ್ಟಕ್ಕೆ ಸಿಲುಕಿರುವ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳಿಗೆ ಭಾರಿ ನೆರವಿನ ಸಹಾಯ ಹಸ್ತ ಚಾಚಿರುವ ಕೇಂದ್ರ ಸರಕಾರವು 2019-20ರ ಸಾಲಿನಲ್ಲಿ 60 ಲಕ್ಷ ಟನ್ ಸಕ್ಕರೆ ರಫ್ತಿಗೆ 6,268 ಕೋಟಿ ರೂ. ಸಬ್ಸಿಡಿ ಘೋಷಿಸಿದೆ.
ಕೇಂದ್ರ ಸಂಪುಟದ ಈ ತೀರ್ಮಾನದಿಂದ ಕರ್ನಾಟಕದ ಕಬ್ಬು ಬೆಳೆಗಾರರಲ್ಲಿ ಭರವಸೆಯ ಬೆಳಕು ಮೂಡಿದೆ. ಕಳೆದ ಮೂರು ವರ್ಷಗಳಿಂದ ಸುಮಾರು 2400 ಕೋಟಿ ರೂ. ಬಾಕಿ ಮೊತ್ತ ರೈತರಿಗೆ ಪಾವತಿಯಾಗಬೇಕಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಕ್ಕರೆ ಆಯುಕ್ತರು ಮತ್ತು ನಿರ್ದೇಶಕರುಗಳ ಮುಂದೆ 500ಕ್ಕೂ ಹೆಚ್ಚಿನ ದೂರುಗಳು ದಾಖಲಾಗಿವೆ. ಇದೀಗ ಕೇಂದ್ರ ತೆಗೆದುಕೊಂಡ ನಿರ್ಧಾರದಿಂದ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಲಭಿಸಲಿದೆ ಎನ್ನುವ ಆಶಾಭಾವನೆ ವ್ಯಕ್ತವಾಗಿದೆ.
ಕರ್ನಾಟಕ ಕೂಡ ಕಬ್ಬು ಬೆಳೆಯುವ ರಾಜ್ಯಗಳಲ್ಲಿ ಒಂದಾಗಿದ್ದು, ರಾಜ್ಯದ ಕಬ್ಬು ರೈತರಿಗೆ ಅನುಕೂಲವಾಗಲಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ ನಂತರದ ಅತಿ ಹೆಚ್ಚು ಸಂಖ್ಯೆಯ ಕಬ್ಬು ಬೆಳೆಗಾರರನ್ನು ಹೊಂದಿರುವ ರಾಜ್ಯ ಕರ್ನಾಟಕ.