ಬೆಂಗಳೂರು, ಆ 29 (Daijiworld News/MSP): ದಕ್ಷಿಣ ಭಾರತಕ್ಕೆ ಉಗ್ರರು ನುಸುಳಿರುವ ಸಾಧ್ಯತೆ ಇದೆ ಎಂದು ಕೇಂದ್ರ ಸರಕಾರ ಸೂಚನೆ ಬೆನ್ನಲ್ಲೇ ಬೆಂಗಳೂರಿನಲ್ಲಿ ದಾಳಿಗೆ ಸಂಚು ಹೂಡಿದ್ದ ಮತ್ತೊಬ್ಬ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ.
ನಜೀರ್ ಶೇಖ್ ಎಂಬಾತನೇ ಬಂಧಿತ ಉಗ್ರನಾಗಿದ್ದಾನೆ. ಈತ ತ್ರಿಪುರದ ಅಗರ್ತಲದಲ್ಲಿ ತಲೆಮರೆಸಿಕೊಂಡಿದ್ದ. ಈತ ಜಮಾತ್ ಉಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ (ಜೆಎಂಬಿ) ಸೇರಿದವನಾಗಿದ್ದಾನೆ. ಶಂಕಿತ ಉಗ್ರನನ್ನು ಮಂಗಳವಾರ ಬಂಧಿಸಿ, ನಗರದಲ್ಲಿರುವ ಎನ್ಐಎ ವಿಶೇಷ ಕೋರ್ಟ್ ಗೆ ಬುಧವಾರ ಹಾಜರುಪಡಿಸಿದ್ದಾಗಿ ಎನ್ಐಎ ತಿಳಿಸಿದೆ.
ಬಂಧಿತ ಶಂಕಿತ ಉಗ್ರ ಬೆಂಗಳೂರಿನ ಚಿಕ್ಕಬಾಣವಾರದಲ್ಲಿ ವಾಸವಾಗಿದ್ದೂ, ನಜೀರ್ ಶೇಖ್, ಜೈಹಿದ್ ಉಲ್ ಇಸ್ಲಾಂ ಅಲಿಯಾಸ್ ಕೌಸರ್, ನಾಸುಲ್ ಇಸ್ಲಾಂ ಅಲಿಯಾಸ್ ಮೋಟಾ ಅನ್ಸಾ, ಆಸೀಫ್ ಇಕ್ಬಾಲ್ ಸೇರಿದಂತೆ ಇತರರ ಜೊತೆ ಇದ್ದ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ ಸ್ಫೋಟಕ ವಸ್ತು ಸಂಗ್ರಹಣೆ ಹಾಗೂ ಉಗ್ರ ಸಂಘಟನೆ ಮಾಡುತ್ತಿದ್ದ. ಇತನ ಬಂಧನವಾಗುತ್ತಿದ್ದಂತೆ ಒಟ್ಟು ಐವರು ಉಗ್ರರು ಜತೆ ಸೇರಿ ಬೆಂಗಳೂರಿನ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. ಉಳಿದವರು ಬೇರೆ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಎನ್ಐಎ ಅಧಿಕಾರಿಗಳು ನಜೀರ್ ನನ್ನು ಬಂಧಿಸಿ, ಆತನಿಂದ ಮೂರು ಫ್ಯಾಬ್ರಿಕೇಟೆಡ್ ಗ್ರೆನೇಡ್, ಐದು ಹ್ಯಾಂಡ್ ಗ್ರೇನೇಡ್, 1 ಐಇಡಿ ಬಾಂಬ್, 2 ಟೈಮರ್ ಡಿವೈಸ್, 1 ಬಾಡಿ ಜಾಕೆಟ್, 9mm ಪಿಸ್ತೂಲ್, ಸಜೀವ ಗುಂಡುಗಳು, 1 ಏರ್ ಗನ್ ವಶಪಡಿಸಿಕೊಂಡಿದ್ದಾರೆ.