ಲಡಾಕ್, ಆ.29(Daijiworld News/SS): ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನಕ್ಕೆ ಮಾತನಾಡುವ ಯಾವುದೇ ಅಸ್ಥಿತ್ವ ಅಥವಾ ಅಧಿಕಾರವಿಲ್ಲ ಎಂದು ರಕ್ಷಣಾ ಖಾತೆ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಸಂವಿಧಾನ ವಿಧಿ 370ನ್ನು ರದ್ದುಪಡಿಸಿ ಜಮ್ಮು-ಕಾಶ್ಮೀರ ವಿಭಜನೆ ಮಾಡಿ ಮತ್ತು ಲಡಾಕ್'ನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ನಂತರ ರಕ್ಷಣಾ ಸಚಿವರು ಮೊದಲ ಬಾರಿಗೆ ಲಡಾಕ್'ಗೆ ಭೇಟಿ ನೀಡಿದ್ದಾರೆ. ಅವರು ಇಂದು ಅಲ್ಲಿ 26ನೇ ಕಿಸಾನ್ -ಜವಾನ್ ವಿಜ್ಞಾನ ಮೇಳೆವನ್ನುದ್ದೇಶಿಸಿ ಮಾತನಾಡಿದರು.
ಕಾಶ್ಮೀರ ಹೇಗೆ ಪಾಕಿಸ್ತಾನದ್ದಾಗಿತ್ತು..? ಕಾಶ್ಮೀರ ವಿಚಾರದಲ್ಲಿ ಅವರೇಕೆ ಹಸ್ತಕ್ಷೇಪ ಮಾಡಬೇಕು..? ಪಾಕಿಸ್ತಾನ ರಚನೆಯಾದ ರಾಷ್ಟ್ರ, ಅದರ ಇರುವಿಕೆಯನ್ನು ನಾನು ಗೌರವಿಸುತ್ತೇನೆ. ಆದರೆ ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನಕ್ಕೆ ಮಾತನಾಡುವ ಯಾವುದೇ ಅಸ್ಥಿತ್ವ ಅಥವಾ ಅಧಿಕಾರವಿಲ್ಲ ಎಂದು ಹೇಳಿದರು.
ಕಾಶ್ಮೀರದ ಬಗ್ಗೆ ಇಷ್ಟೊಂದು ಕಾಳಜಿ ವಹಿಸುವ, ಮಾತನಾಡುವ, ಬೊಬ್ಬಿಡುವ ಪಾಕಿಸ್ತಾನಕ್ಕೆ ನಾನು ಒಂದು ಪ್ರಶ್ನೆ ಕೇಳಲು ಇಚ್ಚಿಸುತ್ತೇನೆ. ಕಾಶ್ಮೀರ ಯಾವಾಗ ನಿಮ್ಮದಾಗಿತ್ತು..? ಎಂದು ಪ್ರಶ್ನಿಸಿದ್ದಾರೆ.
ರಕ್ಷಣಾ ಖಾತೆ ಸಚಿವ ರಾಜನಾಥ್ ಸಿಂಗ್ ಲಡಾಕ್'ನಲ್ಲಿ ಸ್ಥಳೀಯ ಅಧಿಕಾರಿಗಳು ಮತ್ತು ಮಿಲಿಟರಿ ಅಧಿಕಾರಿಗಳ ಜೊತೆಗೆ ಸಭೆಗಳನ್ನು ನಡೆಸಲಿದ್ದಾರೆ.