ಅಹಮದಾಬಾದ್, ಆ.29(Daijiworld News/SS): ಪಾಕಿಸ್ತಾನದ ಕಮಾಂಡೋಗಳು ಸಣ್ಣ ದೋಣಿಗಳಲ್ಲಿ ಕಛ್ ಮತ್ತು ಸರ್ ಕ್ರೀಕ್ ಪ್ರದೇಶದ ಬಂದರಿನ ಮೂಲಕ ಭಾರತದ ಪ್ರದೇಶದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದಾರೆ ಎಂದು ಗುಪ್ತಚರ ಇಲಾಖೆಗಳು ಎಚ್ಚರಿಕೆ ನೀಡಿವೆ.
ಪಾಕಿಸ್ತಾನದಿಂದ ತರಬೇತಿ ಪಡೆದಿರುವ ಕಮಾಂಡೋಗಳು ಮತ್ತು ಉಗ್ರರು ಗುಜರಾತ್ನ ಕಛ್ ಪ್ರದೇಶದ ಮೂಲಕ ಭಾರತದ ಒಳನುಗ್ಗಲು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆಗಳು ಮಾಹಿತಿ ನೀಡಿದ್ದು, ಈ ಹಿನ್ನಲೆ ಗುಜರಾತ್ನ ಬಂದರು ತೀರದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಗುಜರಾತ್ನ ಕರಾವಳಿ ಮತ್ತು ಇತರೆ ಭಾಗಗಳ ಮೇಲೆ ಸಮುದ್ರದಾಳದಿಂದ ದಾಳಿಗಳು ನಡೆಯುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ ನೀಡಲಾಗಿದೆ. ಈ ನಡುವೆ ಗುಜರಾತ್ನ ಹರಮಿ ನಾಲಾ ಪ್ರದೇಶದಲ್ಲಿ ಎರಡು ಪಾಕಿಸ್ತಾನಿ ದೋಣಿಗಳನ್ನು ಗಡಿ ಭದ್ರತಾ ಪಡೆ ಪತ್ತೆ ಹಚ್ಚಿದೆ.
ಗುಪ್ತಚರ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ್ದು, ಏಕ ಎಂಜಿನ್ ಜೋಡಣೆಯ ಎರಡು ದೋಣಿಗಳು ದೊರೆತಿವೆ. ಆದರೆ, ದೋಣಿ ಮತ್ತು ಪ್ರದೇಶದ ಸುತ್ತಮುತ್ತ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಮುಂದ್ರಾದಲ್ಲಿರುವ ಕಾಂಡ್ಲಾ ಬಂದರು, ಅದಾನಿ ಬಂದರು ಹಾಗೂ ಇತರೆ ಪ್ರಮುಖ ಕಟ್ಟಡಗಳ ಮೇಲೆ 'ನೀರಿನಡಿಯಿಂದ ದಾಳಿ' ನಡೆಸಲು ಕಮಾಂಡೋಗಳು ತರಬೇತಿ ಪಡೆದಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.