ಭಟ್ಕಳ, ಆ 29 (DaijiworldNews/SM): ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಯುವಕ ದಾರುಣವಾಗಿ ಸಾವನ್ನಪ್ಪುವ ಮೂಲಕ ದುರಂತ ಅಂತ್ಯ ಕಂಡಿದೆ.
ತಾಲೂಕಿನ ಮುರುಡೇಶ್ವರ ವ್ಯಾಪ್ತಿಯ ಮಂಕಿ ಅನಂತವಾಡಿ ಸೂಳೆಬೀಳು ಅರಣ್ಯ ಪ್ರದೇಶದಲ್ಲಿ ವಿಷ ಸೇವಿಸಿ ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಪೈಕಿ ಯುವಕ ಸಾವನ್ನಪ್ಪಿದ್ದಾನೆ. ಆದರೆ, ತೀವ್ರ ಅಸ್ವಸ್ಥಗೊಂಡ ಯುವತಿಯನ್ನು ಉಡುಪಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಯುವಕನನ್ನು ಮುರುಡೇಶ್ವರ ಜನತಾ ಕಾಲೋನಿಯ ನಿವಾಸಿ ಗಗನ್ ಈಶ್ವರ ನಾಯ್ಕ(27) ಎಂದು ಗುರುತಿಸಲಾಗಿದೆ. ಯುವತಿ ತಾಲೂಕಿನ ಕೈಕಿಣಿ ಗ್ರಾಮ ಪಂಚಾಯತ ಬೆದರಮನೆ ವ್ಯಾಪ್ತಿಯ ಸಂಗೀತಾ ಮಾದೇವ ನಾಯ್ಕ(24) ಎಂದು ತಿಳಿದುಬಂದಿದೆ. ಪ್ರೇಮಿಗಳಿಬ್ಬರೂ ಭಟ್ಕಳ ಸರಕಾರಿ ಪದವಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳಾಗಿದ್ದರು.
ಗಗನ್ ಬಿಎ ಹಾಗೂ ಯುವತಿ ಬಿಕಾಮ್ವರೆಗೆ ಓದಿಕೊಂಡಿದ್ದಾಳೆ. ಯುವಕ ಗಗನ್ ಕೆಲ ತಿಂಗಳ ಹಿಂದೆಯಷ್ಟೇ ಶಿವಮೊಗ್ಗ ತರಿಕೇರಿಯಲ್ಲಿ ಕನ್ಸ್ಟ್ರಕ್ಷನ್ ಕಂಪನಿಯೊಂದರಲ್ಲಿ ಕೆಲ ಕಾಲ ಕೆಲಸ ಮಾಡಿಕೊಂಡಿದ್ದ. ಇನ್ನು ಒಂದೆರಡು ತಿಂಗಳಲ್ಲಿ ಮತ್ತೆ ಕೆಲಸಕ್ಕೆ ತೆರಳುವುದಾಗಿ ಗೆಳೆಯರ ಬಳಿ ಹೇಳಿಕೊಂಡಿದ್ದ ಎಂದು ತಿಳಿದು ಬಂದಿದೆ.
ಆದರೆ, ಬುಧವಾರ ಮಧ್ಯಾಹ್ನದ ಹೊತ್ತಿಗೆ ಅನಂತವಾಡಿ ಕಾಡನ್ನು ಸೇರಿಕೊಂಡಿರುವ ಇಬ್ಬರೂ ೧ ರಿಂದ ೧.೩೦ ಗಂಟೆಯ ಅವಧಿಯಲ್ಲಿ ವಿಷ ಸೇವಿಸಿದ್ದಾರೆ ಎಂದು ತಿಳಿದುಬಂದಿದೆ. ಗಗನ್ ತನ್ನ ಗೆಳೆಯೋರ್ವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಗಗನ್ನ ಗೆಳೆಯರು ಹಾಗೂ ಸಹೋದರ ಎಲ್ಲರೂ ಸೇರಿಕೊಂಡು ಅನಂತವಾಡಿಯತ್ತ ಧಾವಿಸಿ ಬಂದಿದ್ದಾರೆ. ಸರಿಸುಮಾರು 2 ಗಂಟೆ ಅವಧಿಯವರೆಗೆ ಪ್ರೇಮಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಇಬ್ಬರೂ ಪತ್ತೆಯಾಗುವಷ್ಟರಲ್ಲಿ ಗಗನ್ ತೀವ್ರ ಅಸ್ವಸ್ಥಗೊಂಡಿರುವುದು ತಿಳಿದು ಬಂದಿದೆ.
ಇಬ್ಬರನ್ನು ಆಸ್ಪತ್ರೆ ತಲುಪುವಷ್ಟರಲ್ಲಿ ಗಗನ್ನ ಪ್ರಾಣ ಬಿಟ್ಟಿದ್ದ ಎಂದು ತಿಳಿದು ಬಂದಿದೆ. ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಸಂಗೀತಾಳನ್ನು ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಯಾವ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿಲ್ಲ.