ಬೆಂಗಳೂರು, ಆ.30(Daijiworld News/SS): ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರ ಪಕ್ಷದಲ್ಲೇ ಹಲವು ಗೊಂದಲಗಳಿವೆ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ.
ಉತ್ತರಾಂಚಲ, ಛತ್ತೀಸ್ ಗಡ, ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ರಾಜ್ಯದಲ್ಲೂ ಅನೇಕ ಸಾವು-ನೋವು ಸಂಭವಿಸಿವೆ. ಸಿಎಂ ಯಡಿಯೂರಪ್ಪ, ನಿಯೋಗ ಕರೆದೊಯ್ದು ಅನುದಾನ ತರುವುದಾಗಿ ಹೇಳಿದ್ದಾರೆ. ಮೊದಲ ಬಾರಿಗೆ ಮೂವರು ಡಿಸಿಎಂ ಮಾಡಿದ್ದಾರೆ. ಯಾವ ಆಧಾರದಲ್ಲಿ ಮಾಡಿದ್ದಾರೆಂಬುದು ಗೊತ್ತಿಲ್ಲ. ಅವರ ಪಕ್ಷದಲ್ಲೇ ಹಲವು ಗೊಂದಲಗಳಿವೆ ಎಂದು ಟೀಕಿಸಿದರು.
ಈಗಾಗಲೇ ಲಭಿಸಿರುವ ಮಾಹಿತಿ ಅನ್ವಯ ಹಲವು ಸರ್ಕಾರಿ ಇಲಾಖೆಗಳ ನೌಕರರಿಗೆ ಸಂಬಳ ಆಗಿಲ್ಲ. ಸರ್ಕಾರಿ ಸ್ವಾಮ್ಯದ ಹಲವು ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿದ್ದಾರೆ. ಆರ್ಥಿಕ ಸಂಕಷ್ಟದಿಂದಾಗಿ ಹಲವರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಚುನಾವಣೆ ಬಳಿಕ 6 ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಪೀಣ್ಯಾ ಕೈಗಾರಿಕಾ ಪ್ರದೇಶದಲ್ಲಿ ಯಾವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇನ್ನೂ ಹಲವು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಗೆ ಕೊಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಇದಕ್ಕೆ ಕೇಂದ್ರ ಸರ್ಕಾರ ಅರ್'ಬಿಐನಿಂದ ದೊಡ್ಡ ಪ್ರಮಾಣದ ಹಣ ಪಡೆದಿರುವುದೇ ಸಾಕ್ಷಿ. ಭಾರತೀಯ ರಿಸರ್ವ್ ಬ್ಯಾಂಕಿನಿಂದ ದೊಡ್ಡ ಪ್ರಮಾಣದ ಹಣ ತೆಗೆದುಕೊಂಡಿದ್ದಾರೆ. ಕೇಂದ್ರ ಸರ್ಕಾರ ಹಿಂದೆಂದೂ ಈ ಪ್ರಮಾಣದಲ್ಲಿ ಹಣ ತೆಗೆದುಕೊಂಡಿರಲಿಲ್ಲ ಎಂದು ದೂರಿದ್ದಾರೆ.