ಶ್ರೀನಗರ,ಆ 30(Daijiworld News/RD): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ಉಗ್ರ ದಾಳಿ ಮುಂದುವರಿದಿದ್ದು, ಶ್ರೀನಗರದಲ್ಲಿ 65 ವರ್ಷದ ವೃದ್ಧನನ್ನು ಗುಂಡಿಕ್ಕಿ ಕೊಂದ ಘಟನೆ ನಡೆದಿದೆ.
ಶ್ರೀನಗರದ ಹೊರಭಾಗದಲ್ಲಿರುವ ಪರಿಂಪೋರದಲ್ಲಿ ವೃದ್ಧ ವ್ಯಕ್ತಿಯೊಬ್ಬರು ಅಂಗಡಿಯನ್ನು ತೆರೆಯುತ್ತಿದ್ದ ವೇಳೆ ಅಲ್ಲಿಗೆ ಧಾವಿಸಿದ ಉಗ್ರರು ಈ ಕೃತ್ಯ ಎಸಗಿದ್ದಾರೆ. ಆತ ಅಂಗಡಿ ತೆರೆದದ್ದನ್ನು ಗಮನಿಸಿದ ಉಗ್ರರು ಆತನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಇದಕ್ಕೂ ಮುನ್ನ ಅನಂತ್ ನಾಗ್ ಜಿಲ್ಲೆಯಲ್ಲಿ ಟ್ರಕ್ ಡ್ರೈವರ್ ನ್ನು ಕಲ್ಲು ಹೊಡೆದು ಹತ್ಯೆ ಮಾಡಲಾಗಿತ್ತು. ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಕಾಶ್ಮೀರದ ಪರಿಸ್ಥಿತಿ ಪರಿಶೀಲನೆಗೆ ತೆರಳುತ್ತಿರುವುದಕ್ಕೆ ಹೋಗುವ ಮುನ್ನವೇ ಓರ್ವ ನಾಗರಿಕನನ್ನು ಹತ್ಯೆ ಮಾಡಲಾಗಿದೆ ಎಂದು ಮುಲಗಳಿಂದ ತಿಳಿದು ಬಂದಿದೆ.
ಗುಂಡೇಟಿಗೆ ಗುರಿಯಾದ ವೃದ್ಧನನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್
ಮಾಡಿದ್ದಾರೆ.