ನವದೆಹಲಿ, ಆ.30(Daijiworld News/SS): ಉಗ್ರವಾದವನ್ನು ಪಾಕಿಸ್ತಾನ ತನ್ನ ನೆಲದಿಂದಲೇ ನಿರ್ಮೂಲನೆ ಮಾಡಬೇಕೆಂದು ಭಾರತೀಯ ವಿದೇಶಾಂಗ ಇಲಾಖೆ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದೆ.
ಪಾಕಿಸ್ತಾನವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಭಾರತ, ನೆರೆಯ ರಾಷ್ಟ್ರದ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಂಡು ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ಪಾಕಿಸ್ತಾನಕ್ಕೆ ಸೂಚನೆ ನೀಡಿದೆ. ಭಾರತದ ಆಂತರಿಕ ಮತ್ತು ಸೂಕ್ಷ್ಮ ವಿಚಾರದಲ್ಲಿ ಪಾಕಿಸ್ತಾನದ ಪ್ರಧಾನಿ ಮತ್ತು ಸಚಿವರು ಬೇಜಬಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಭಾರತದ ಆಂತರಿಕ ವಿಚಾರವಾಗಿ ಪಾಕಿಸ್ತಾನದ ನಾಯಕರು ನೀಡುತ್ತಿರುವ ಬೇಜವಾಬ್ದಾರಿ ಹೇಳಿಕೆಗಳು ಮತ್ತು ಟ್ವೀಟ್ಗಳನ್ನು ಭಾರತ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇದೇ ವೇಳೆ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್, ಪಾಕಿಸ್ತಾನದ ಉಗ್ರ ಕಮಾಂಡೋಗಳು ಗುಜರಾತ್ ಮೂಲಕ ಒಳನುಸುಳಲು ಯತ್ನಿಸುತ್ತಿದ್ದಾರೆ. ಜಲಮಾರ್ಗದ ಮೂಲಕ ಭಾರತದ ಒಳನುಸುಳಿಸಿ ಕೋಮು ಸಮಸ್ಯೆ ಹುಟ್ಟುಹಾಕಲು ಅಥವಾ ಭಯೋತ್ಪಾದಕ ದಾಳಿ ಎಸಗಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಹಜ ನೆರೆಯ ದೇಶದಂತೆ ಪಾಕಿಸ್ತಾನ ವರ್ತಿಸಲಿ, ಸಹಜವಾಗಿ ಮಾತನಾಡಲಿ, ಸಹಜವಾಗಲಿ ವ್ಯವಹರಿಸಲಿ. ನಾವು ಅವರೊಂದಿಗೆ ಸಹಜ ನೆರೆ ದೇಶದಂತೆ ವರ್ತಿಸುತ್ತೇವೆ. ಅವರು ನೆರೆ ದೇಶದ ಮೇಲೆ ಭಯೋತ್ಪಾದಕರನ್ನು ಛೂ ಬಿಡುವ ಕೆಲಸ ಮಾಡದಿರಲಿ ಎಂದು ತಿಳಿಸಿದ್ದಾರೆ.