ಬೆಂಗಳೂರು, ಆ.30(Daijiworld News/SS): ಕಾನೂನು ವ್ಯವಸ್ಥೆಗಳಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ ಮತ್ತು ಅದನ್ನು ನಾನು ಕಾನೂನುಬದ್ಧವಾಗಿ ಮತ್ತು ರಾಜಕೀಯವಾಗಿ ಎದುರಿಸುತ್ತೇನೆ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
ಇಂದು ಮಧ್ಯಾಹ್ನ 1 ಗಂಟೆಗೆ ದಿಲ್ಲಿಯ ಇ.ಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಆ.29ರ ರಾತ್ರಿ 9.40 ಕ್ಕೆ ಇ.ಡಿ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. ಈ ಹಿನ್ನಲೆ ಟ್ವೀಟ್ ಮಾಡಿರುವ ಅವರು, ನಾನು ವಿಚಾರಣೆಗೆ ಹಾಜರಾಗಿ ಸಹಕರಿಸುವೆ. ಏಕಾಏಕಿ ವಿಚಾರಣೆ ನಿಗದಿ ಪಡಿಸಿರುವುದು ದುರುದ್ದೇಶಪೂರಿತವಾಗಿದ್ದರೂ, ಈ ದೇಶದ ಕಾನೂನನ್ನು ನಂಬುತ್ತೇನೆ ಮತ್ತು ಅದಕ್ಕೆ ಬದ್ಧನಾಗಿರುವ ನಾನು, ನಿಗದಿತ ವಿಚಾರಣೆಗೆ ಹಾಜರಾಗಿ ಸಹಕರಿಸುತ್ತೇನೆ ಎಂದು ಸ್ಪಷ್ಟ ಪಡಿಸಿದ್ದಾರೆ.
ಕಾಂಗ್ರೆಸ್ಸಿನ ನಿಷ್ಠಾವಂತ ಸೈನಿಕ ಮತ್ತು ಜವಾಬ್ದಾರಿಯುತ ರಾಜಕಾರಣಿಯಾಗಿ, ನನ್ನ ಪಕ್ಷ ನಿರ್ದೇಶಿಸಿದಂತೆ ಮಾಡಿದ್ದೇನೆ. ಅದಕ್ಕಾಗಿ ನನ್ನನ್ನು ಗುರಿಯಾಗಿಸಲಾಗುತ್ತಿದೆ. ಕಾನೂನು ವ್ಯವಸ್ಥೆಗಳಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ ಮತ್ತು ಅದನ್ನು ನಾನು ಕಾನೂನುಬದ್ಧವಾಗಿ ಮತ್ತು ರಾಜಕೀಯವಾಗಿ ಎದುರಿಸುತ್ತೇನೆ ಎಂದು ಹೇಳಿದ್ದಾರೆ.