ಬೆಂಗಳೂರು,ಆ 30 (Daijiworld News/RD): ಕರ್ನಾಟಕ್ಕಕ್ಕೆ ಪ್ರತ್ಯೇಕ ನಾಡ ಧ್ವಜಬೇಕು ಎಂಬ ವಿಚಾರ ಪ್ರಚಲಿತದಲ್ಲಿದ್ದು, ಇದಕ್ಕೆ ಸಂಬಂಧಿಸಿದಂತೆ ರಾಜ್ಯಕ್ಕೆ ಪ್ರತ್ಯೇಕವಾದ ನಾಡಧ್ವಜದ ಅಗತ್ಯ ಇಲ್ಲ, ಅದರ ಬದಲು ರಾಷ್ಟ್ರ ಧ್ವಜ ಒಂದೇ ಸಾಕು ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಅವರ ಈ ಹೇಳಿಕೆ ಕನ್ನಡಪರ ಸಂಘಟನೆ ಸೇರಿದಂತೆ ಇದೀಗ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.
ಬಾವುಟದ ವಿಚಾರವಾಗಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಿ.ಟಿ. ರವಿ, “ನಾಡಧ್ವಜವನ್ನು ಸಾಂಸ್ಕೃತಿಕ ಸಂಕೇತವಾಗಿ ಬಳಸಲು ಅವಕಾಶವಿದೆಯೇ ಹೊರತು ಸಾಂವಿಧಾನಾತ್ಮಕವಾಗಿ ಬಳಸಲು ಅವಕಾಶವಿಲ್ಲ. ಹಾಗಾಗಿ ಇಡೀ ರಾಷ್ಟ್ರಕ್ಕೆ ಒಂದೇ ತ್ರಿವರ್ಣ ಧ್ವಜ ಮಾತ್ರ ಬಳಕೆ ಮಾಡಲು ಧ್ವಜ ಸಂಹಿತೆಯಲ್ಲಿ ಅವಕಾಶ ಇದೆ,” ಎಂದು ಹೇಳುವ ಮೂಲಕ ಪ್ರತ್ಯೇಕ ಕನ್ನಡ ನಾಡ ಧ್ವಜ ಪ್ರಸ್ತಾವನೆಯನ್ನು ಸರ್ಕಾರ ಪರೋಕ್ಷವಾಗಿ ತಳ್ಳಿಹಾಕಿರುವುದನ್ನು ತಿಳಿಸಿದ್ದಾರೆ.
ಸಿ.ಟಿ.ರವಿಯ ಈ ಹೇಳಿಕೆ ಎಲ್ಲೆಡೆ ಆಕ್ರೋಶಕ್ಕೆ ಗುರಿಯಾಗಿದ್ದು, “ಕನ್ನಡ ಬಾವುಟದ ಹಿರಿಮೆ ಗೊತ್ತಿಲ್ಲದ ಜನಪ್ರತಿನಿಧಿಗಳು ಯಾರೇ ಇರಲಿ ರಾಜ್ಯ ಬಿಟ್ಟು ತೊಲಗಲಿ,” ಎಂದು ಕೆಲವರು ಹೇಳಿದ್ದಾರೆ. “ನಮ್ಮ ನೆಲ,ಜಲ, ನಾಡು, ಭಾಷೆ, ಇವುಗಳ ಮೇಲೆ ಸ್ವಾಭಿಮಾನ ಇಲ್ಲದವರೆಂದರೆ ಅದು ಬಿಜೆಪಿಯವರು ಮಾತ್ರ. ಬಿಜೆಪಿಯಲ್ಲಿ ಮಾತ್ರ ಕನ್ನಡದ ಅಸ್ಮಿತೆಗೆ ಕನ್ನಡದ ಧ್ವಜಕ್ಕೆ ಅವಮಾನ ಮಾಡುವಂತಹ ಆಲೋಚನೆ ಬರಲು ಸಾಧ್ಯ. ಕರ್ನಾಟಕದ ಇತಿಹಾಸ, ಪರಂಪರೆ, ಸಂಸ್ಕೃತಿಯ ಪ್ರತೀಕ ನಮ್ಮ ಕನ್ನಡದ ಬಾವುಟ,” ಎಂದು ನಟರಾಜ್ ಗೌಡ ಎನ್ನುವವರು ಟ್ವೀಟ್ ಮಾಡಿದ್ದಾರೆ.
ಸಚಿವರ ಈ ಹೇಳಿಕೆಗೆ ಸಾಮಜಿಕ ಜಾಲಾತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಸಚಿವರನ್ನು ಹಾಗೂ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಟ್ವೀಟ್ ಮಾಡುವ ಮೂಲಕ ಸಚಿವರ ವಿರುದ್ಧ ರೊಚ್ಚಿಗೆದ್ದಿದ್ದಾರೆ.