ಬೆಂಗಳೂರು, ಆ.30(Daijiworld News/SS): ನಾಡಧ್ವಜ ವಿರೋಧಿಸಿರುವುದು ಸರಿಯಲ್ಲ. ಸರ್ಕಾರದ ನಿಲುವು ಸ್ಪಷ್ಟವಾಗಿ ಕನ್ನಡ ವಿರೋಧಿಯಾದುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದ್ದಾರೆ.
ದೇಶಕ್ಕೊಂದೇ ಧ್ವಜ ಅದು ತ್ರಿವರ್ಣ ಧ್ವಜ. ಕನ್ನಡದ ಧ್ವಜವು ನಾಡಿನ ಸಾಂಸ್ಕೃತಿಕ ಧ್ವಜ. ಆದ್ದರಿಂದ ರಾಷ್ಟ್ರ ಧ್ವಜಕ್ಕೆ ಪರ್ಯಾಯ ಧ್ವಜ ಹೊಂದಲು ಸಾಧ್ಯವಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದರು. ಈ ಹೇಳಿಕೆಗೆ ಸಿದ್ದರಾಮಯ್ಯ ಟ್ವೀಟ್ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ. ನಾಡಧ್ವಜ ವಿರೋಧಿಸಿರುವುದು ಸರಿಯಲ್ಲ. ನಾವು ಪ್ರತ್ಯೇಕ ಧ್ವಜ ಕೇಳುತ್ತಿಲ್ಲ. ರಾಜ್ಯಗಳು ತಮ್ಮದೇ ಧ್ವಜ ಹೊಂದಲು ಸಂವಿಧಾನ ಇಲ್ಲವೇ ಕಾನೂನಿನಲ್ಲಿ ಯಾವ ಅಡ್ಡಿಯೂ ಇಲ್ಲ. ಸರ್ಕಾರದ ನಿಲುವು ಸ್ಪಷ್ಟವಾಗಿ ಕನ್ನಡ ವಿರೋಧಿಯಾದುದು ಎಂದು ಟೀಕಿಸಿದ್ದಾರೆ.
ನಾಡಗೀತೆ ಒಪ್ಪಿಕೊಂಡಿರುವ ನಾವು, ರಾಷ್ಟ್ರಧ್ವಜದ ಕೆಳಗೆ ಬೇರೆ ಧ್ವಜ ಹೊಂದಲು ಇರುವ ಸಮಸ್ಯೆ ಏನು. ನಾವು ನಮಗೊಂದು ನಾಡಗೀತೆಯನ್ನು ಒಪ್ಪಿಕೊಂಡಿಲ್ಲವೇ..? ಇದರಿಂದ ರಾಷ್ಟ್ರಗೀತೆಗೆ ಅವಮಾನ ಮಾಡಿದಂತಾಗುವುದೇ..? ರಾಷ್ಟ್ರಧ್ವಜದ ಕೆಳಗೆ ಬೇರೆ ಧ್ವಜ ಹಾರಿಸಬೇಕೆಂದು ರಾಷ್ಟ್ರಧ್ವಜ ಸಂಹಿತೆ ಹೇಳಿದೆ. ಅದನ್ನು ಪಾಲಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಬೇರೇನು ಸಮಸ್ಯೆ ಇದೆ... ? ಎಂದು ಪ್ರಶ್ನಿಸಿದ್ದಾರೆ.
ಹಿರಿಯರಾದ ಡಾ.ಪಾಟೀಲ ಪುಟ್ಟಪ್ಪ ಮತ್ತಿತರ ಕನ್ನಡ ಹೋರಾಟಗಾರರು ನಾಡಧ್ವಜಕ್ಕಾಗಿ ಮನವಿಮಾಡಿದ್ದರು. ಆ ಬಗ್ಗೆ ಅಧ್ಯಯನ ನಡೆಸಿದ್ದ ತಜ್ಞರ ಸಮಿತಿ ವಿನ್ಯಾಸಗೊಳಿಸಿದ್ದ ನಾಡಧ್ವಜಕ್ಕೆ ಮನ್ನಣೆ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಕೋರಿದ್ದೆವು. ಈಗ ರಾಜ್ಯ ಸರ್ಕಾರವೇ ವಿರೋಧಿಸುತ್ತಿರುವುದು ಖಂಡನೀಯ. ಕನ್ನಡ ಮತ್ತು ಸಂಸ್ಕೃತಿ ಸಚಿವರು ನಾಡಧ್ವಜ ಅಗತ್ಯ ಇಲ್ಲ ಎಂದು ಹೇಳಿ ಕನ್ನಡಿಗರನ್ನು ಕೆರಳಿಸಿರುವುದು ಸರಿ ಅಲ್ಲ. ಮಾಡಬೇಕಾಗಿರುವ ಕೆಲಸ ಬಿಟ್ಟು ಸಚಿವರು ಅನಗತ್ಯವಾಗಿ ವಿವಾದ ಸೃಷ್ಟಿಸಲು ಹೊರಟಂತಿದೆ. ಸಚಿವರು ತಕ್ಷಣ ತಮ್ಮ ಅಭಿಪ್ರಾಯವನ್ನು ಹಿಂದಕ್ಕೆ ಪಡೆದು ನಾಡಧ್ವಜವನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ.