ಪಾಟ್ನಾ,ಆ 30 (Daijiworld News/RD): ಸಚಿವಾಲಯದ ನೌಕರರು ಇನ್ನು ಮುಂದೆ ಕಚೇರಿಗೆ ಹಾಜರಾಗುವಾಗ ಜೀನ್ಸ್ ಮತ್ತು ಟೀ ಶರ್ಟ್ ಉಡುಪನ್ನು ಧರಿಸುವಂತಿಲ್ಲ ಎಂದು ಬಿಹಾರ ಸರ್ಕಾರ ಹೊಸ ನಿರ್ಣಯವನ್ನು ಕೈಗೊಂಡಿದೆ.
ಈ ಮೂಲಕ ಭಾರತೀಯ ಸಂಸ್ಕೃತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ಸೂಚಿಸಿದೆ. ಜೀನ್ಸ್ ಮತ್ತು ಟೀ ಶರ್ಟ ಉಡುಪುಗಳು ಪಾಶ್ಚಾತ್ಯ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿದ್ದು,ಇದನ್ನು ತೊಲಗಿಸುವ ಸಲುವಾಗಿ ಬಿಹಾರ ಸರ್ಕಾರವು ಇನ್ನು ಮುಂದೆ ಸಚಿವಾಲಯದ ಅಧಿಕಾರಿಗಳು ಮತ್ತು ನೌಕರರು ಕಚೇರಿಯಲ್ಲಿ ಸರಳ, ಆರಾಮದಾಯಕ ಮತ್ತು ತಿಳಿ ಬಣ್ಣದ ಉಡುಪು ಧರಿಸುವಂತೆ ಆದೇಶಿಸಿದೆ.
ಈ ಬಗ್ಗೆ ಮಾತನಾಡಿರುವ ಕಾರ್ಯದರ್ಶಿ ಮಹದೇವ್ ಪ್ರಸಾದ್, ಕಚೇರಿ ಸಂಸ್ಕೃತಿಗೆ ವಿರುದ್ಧವಾದ ಉಡುಪಿನಲ್ಲಿ ಅಧಿಕಾರಿಗಳು ಮತ್ತು ನೌಕರರು ಕಚೇರಿಗೆ ಬರುತ್ತಿರುವುದು ಗಮನಕ್ಕೆ ಬಂದಿದೆ. ಇದು ಕಚೇರಿಯ ಸಭ್ಯತೆಗೆ ವಿರುದ್ಧವಾಗಿದೆ. ಪ್ರತಿಯೊಬ್ಬರು ಸಾಂಪ್ರದಾಯಿಕ ಉಡುಗೆಯಲ್ಲೇ ಕಚೇರಿಗೆ ಬರಬೇಕು ಎಂದು ಹೇಳಿದ್ದಾರೆ. ಜೊತೆಗೆ ಹವಾಮಾನಕ್ಕೆ ಅನುಗುಣವಾಗಿ ನಿಮ್ಮ ಉಡುಪನ್ನು ಆಯ್ಕೆ ಮಾಡಿಕೊಂಡು ಧರಿಸಬಹುದು ಎಂದು ತಿಳಿಸಿದ್ದಾರೆ.