ಲಕ್ನೋ,ಆ 30 (Daijiworld News/RD): ಕೇಂದ್ರದ ಮಾಜಿ ಸಚಿವ, ಬಿಜೆಪಿ ನಾಯಕ ಸ್ವಾಮಿ ಚಿನ್ಮಯಾನಂದ ತನ್ನ ಮೇಲೆ ದೌರ್ಜನ್ಯ ನಡೆಸುತ್ತಿದ್ದು, ಅನೇಕ ಹೆಣ್ಣು ಮಕ್ಕಳ ಜೀವನವನ್ನು ಹಾಳು ಮಾಡಿದ್ದಾನೆ ಎಂದು ಆರೋಪಿಸಿದ ಬೆನ್ನಲ್ಲೆ ನಾಪತ್ತೆಯಾಗಿದ್ದ ಉತ್ತರ ಪ್ರದೇಶದ ಶಹಜಹಾನ್ಪುರದ ಕಾನೂನು ವಿದ್ಯಾರ್ಥಿನಿ ಆರು ದಿನಗಳ ಬಳಿಕ ರಾಜಸ್ತಾನದಲ್ಲಿ ಪತ್ತೆಯಾಗಿದ್ದಾಳೆ.
ವಿದ್ಯಾರ್ಥಿ ನಾಪತ್ತೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಆಕೆಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಲಯ, ವಿದ್ಯಾರ್ಥಿ ಸರಿಯಾಗಿ ಎಲ್ಲಿದ್ದಾಳೆ ಎಂದು ತಿಳಿಸಿ ಆಕೆಯನ್ನು ನ್ಯಾಯಾಲಯಕ್ಕೆ ಹಾಜಾರುಪಡಿಸಿ ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚನೆ ನೀಡಲಾಗಿತ್ತು. ಇದರ ಬೆನ್ನಲ್ಲೇ ಉತ್ತರ ಪ್ರದೇಶ ಸರ್ಕಾರ ವಿದ್ಯಾರ್ಥಿ ಪತ್ತೆಪುರ್ ಸಿಕ್ರಿಯಲ್ಲಿದ್ದು, ಆಕೆಯೊ ಸ್ನೇಹಿತ ಜೊತೆಗಿದ್ದಾಳೆ. ಇನ್ನು ಎರಡು ವರೆಗಂಟೆಯೊಳಗೆ ಅವರು ದೆಹಲಿ ತಲುಪಲಿದ್ದಾರೆ ಎಂದಿದ್ದಾರೆ. ಈ ಕುರಿತು ಮಾತನಾಡಿರುವ ಉತ್ತರ ಪ್ರದೇಶ ಡಿಜಿಪಿ ಒಪಿ ಸಿಂಗ್, ವಿದ್ಯಾರ್ಥಿನಿ ಪತ್ತೆಯಾಗಿದ್ದು, ಆಕೆಯನ್ನು ರಾಜ್ಯಕ್ಕೆ ಕರೆತರುವ ಪ್ರಯತ್ನ ನಡೆಸಲಾಗುತ್ತಿದೆ ಎಂದಿದ್ದಾರೆ.
ಬಿಜೆಪಿ ನಾಯಕ ಚಿನ್ಮಯಾನಂದ ಸಮಾಜದಲ್ಲಿ ಸಂತನಂತೆ ಮುಖವಾಡ ಧರಿಸಿ ಅನೇಕ ಹೆಣ್ಣು ಮಕ್ಕಳ ಜೀವನ ಹಾಳು ಮಾಡಿದ್ದಾನೆ. ಈತ ನನ್ನ ಮೇಲೂ ದೌರ್ಜನ್ಯ ಎಸಗಿದ್ದು, ಈ ಕುರಿತು ನನ್ನ ಬಳಿ ಸಾಕ್ಷಿಗಳಿವೆ. ಹೀಗಾಗಿ ನಾನು ಇಂದು ಅಪಾಯದ ಸ್ಥಿತಿಯಲ್ಲಿದ್ದೇನೆ, ನಾನು ನನ್ನ ಕುಟುಂಬ ಜೀವ ಭಯದಲ್ಲಿ ಕಾಲಕಳೆಯುತ್ತಿದ್ದೇವೆ. ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನಮಗೆ ಸಹಾಯ ಮಾಡಬೇಕು ಎಂದು ವಿದ್ಯಾರ್ಥಿನಿ ಕಳೆದ ಶುಕ್ರವಾರ ವಿಡಿಯೋವೊಂದನ್ನು ಫೇಸ್ಬುಕ್ನಲ್ಲಿ ಫೋಸ್ಟ್ ಮಾಡಿದ್ದು, ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದಾದ ಬಳಿಕ ವಿದ್ಯಾರ್ಥಿ ನಾಪತ್ತೆಯಾಗಿದ್ದಳು.ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಚಿನ್ಮಯಾನಂದ ವಿರುದ್ಧ ಐಪಿಸಿ ಸೆಕ್ಷನ್ 364, 506 ಪ್ರಕರಣ ದಾಖಲಿಸಿಕೊಂಡಿದ್ದರು.