ನವದೆಹಲಿ, ಆ 30 (DaijiworldNews/SM): ಐಎನ್ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಬಿಐ ವಶದಲ್ಲಿರುವ ಕೇಂದ್ರದ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರ ಕಸ್ಟಡಿಯ ಅವಧಿಯನ್ನು ವಿಸ್ತರಿಸಲಾಗಿದೆ. ಸೆಪ್ಟೆಂಬರ್ ೨ರ ತನಕ ಅವರನ್ನು ಕಸ್ಟಡಿಯಲ್ಲಿರುವಂತೆ ದೆಹಲಿ ಕೋರ್ಟ್ ಆದೇಶ ನೀಡಿದೆ.
ಐಎನ್ ಎಕ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಆ.21 ರಂದು ಸಿಬಿಐ ನಿಂದ ಚಿದಂಬರಂ ಅವರನ್ನು ಬಂಧಿಸಲಾಗಿತ್ತು. ಆಗಸ್ಟ್ 30ರ ವರೆಗೆ ಸಿಬಿಐ ಕಸ್ಟಡಿ ವಿಧಿಸಲಾಗಿತ್ತು. ಆದರೆ, ಇಂದು ಅವಧಿ ಕೊನೆಗೊಂಡ ಹಿನ್ನೆಲೆಯಲ್ಲಿ ಮತ್ತೆ ಕೋರ್ಟ್ ಮುಂದೆ ಅವರನ್ನು ಹಾಜರುಪಡಿಸಲಾಗಿದೆ. ಆದರೆ, ಕಸ್ಟಡಿಯನ್ನು ವಿಸ್ತರಿಸಿರುವ ಕೋರ್ಟ್ ಸೆ.2ರವರೆಗೆ ಸಿಬಿಐ ವಶಕ್ಕೆ ನೀಡಿ ಆದೇಶ ನೀಡಿದೆ.
ಇನ್ನು ಈ ಮೊದಲು ವಿಚಾರಣೆಗೂ ಮುನ್ನ ಚಿದಂಬರಂ ಪರ ವಕೀಲರು ಸುಪ್ರೀಂ ಮೆಟ್ಟಿಲೇರಿದ್ದರು. ಸೆ.2ರವರೆಗೆ ಸಿಬಿಐ ವಶದಲ್ಲೇ ಇರಲು ಚಿದಂಬರಂಗೆ ಅನುಮತಿ ನೀಡಬೇಕೆಂದು ಮನವಿ ಸಲ್ಲಿಸಿದ್ದರು. ವಿಚಾರಣಾಧೀನ ನ್ಯಾಯಾಲಯ ತಮ್ಮನ್ನು ಸಿಬಿಐ ವಶಕ್ಕೆ ನೀಡಿರುವುದು ಹಾಗೂ ನಿರೀಕ್ಷಣಾ ಜಾಮೀನನ್ನು ನಿರಾಕರಿಸಿರುವುದನ್ನು ಪ್ರಶ್ನಿಸಿ ಚಿದಂಬರಂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು ಸೆ.2 ರಂದು ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.