ಬೆಂಗಳೂರು, ಆ.31(Daijiworld News/SS): ಭಾರತೀಯ ಉದ್ಯಮದ ಪ್ರಗತಿಯಲ್ಲಿ ರಾಜ್ಯದ ಕೊಡುಗೆ ಅಪಾರವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ದೇಶದ ಒಟ್ಟಾರೆ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ರಾಜ್ಯ ಶೇ. 9ರಷ್ಟು ಪಾಲು ಹೊಂದಿದೆ. ಕರ್ನಾಟಕ ತನ್ನ ಸಮಗ್ರ ಹಾಗೂ ತಂತ್ರಗಾರಿಕೆಯ ಪ್ರಗತಿ ಯೋಜನೆಗಳ ಮೂಲಕ ಜಾಗತಿಕ ಮಟ್ಟದ ವಿವಿಧ ವಲಯಗಳಿಂದ ಬೃಹತ್ ಪ್ರಮಾಣದ ಹೂಡಿಕೆಯನ್ನು ಆಕರ್ಷಿಸುತ್ತಿದೆ ಎಂದು ಹೇಳಿದರು.
ಸೇವಾ ವಲಯ ಹಾಗೂ ವ್ಯಾಪಾರ ವಲಯದಲ್ಲಿ 4ನೇ ರಫ್ತು ಪ್ರಮಾಣವನ್ನು ಹೊಂದಿದೆ. ರಾಜ್ಯದ ಪಾರದರ್ಶಕ ನೀತಿಗಳು ಹೊಸ ಉದ್ಯಮ ಹಾಗೂ ಉದ್ಯಮಿಗಳಿಗೆ ಅನುಕೂಲಕರವಾಗಿದೆ. ಭಾರತೀಯ ಉದ್ಯಮದ ಪ್ರಗತಿಯಲ್ಲಿ ರಾಜ್ಯದ ಕೊಡುಗೆ ಅಪಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ರಾಜ್ಯವನ್ನು ದೇಶದ ವಿದ್ಯುತ್ ಚಾಲಿತ ರಾಜಧಾನಿಯನ್ನಾಗಿಸುವ ಗುರಿ ಇದೆ. ರಾಜ್ಯದಲ್ಲಿ ಇಂದು ವಿವಿಧ ವಲಯಗಳಿಗೆ ಸೇರಿದ 20 ನೀತಿಗಳಿವೆ ಹಾಗೂ ದೇಶದಲ್ಲೇ ಪ್ರಥಮ ಬಾರಿಗೆ ವಿದ್ಯುತ್ ಚಾಲಿತ ವಾಹನ ಹಾಗೂ ವಿದ್ಯುತ್ ಚಾಲಿತ ಸಂಗ್ರಹ ಯೋಜನೆಯ ನೀತಿಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.