ನವದೆಹಲಿ, ಆ.31(Daijiworld News/SS): ಜಿಡಿಪಿ ಪ್ರಗತಿ ದರ ಬಿಡುಗಡೆಯಾಗುತ್ತಲೇ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ.
ಜಿಡಿಪಿ ದರ ಕಳೆದ 6 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕಿಳಿಯಲು ಮೋದಿ ನಿರ್ಮಿತ ವಿಪತ್ತು ಕಾರಣವೇ ಹೊರತು ಜಾಗತಿಕ ಸ್ಥಿತಿಗತಿಗಳಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.
ಜಿಡಿಪಿ ಪ್ರಗತಿ ದರ ಶೇ.5ಕ್ಕಿಳಿದಿದೆ. ನೋಟು ಅಮಾನ್ಯ, ಅಸಮರ್ಪಕ ಜಿಎಸ್'ಟಿ ಮತ್ತು ಸರಕಾರದ ಅಸಮರ್ಥತೆ ಈಗ ಫಲ ಕೊಡಲಾರಂಭಿಸಿದೆ. ಈ ಆರ್ಥಿಕ ಬಿಕ್ಕಟ್ಟು ಜಾಗತಿಕ ಪರಿಸ್ಥಿತಿಯಿಂದ ಆಗಿರುವಂಥದ್ದಲ್ಲ. ಇದು ಮೋದಿ ನಿರ್ಮಿತ ವಿಪತ್ತು. ಯಾವುದಕ್ಕೂ ನಿಮ್ಮ ಸೀಟು ಬೆಲ್ಟ್ಗಳನ್ನು ಹಾಕಿಕೊಂಡಿರಿ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಕುರಿತು ಮಾತನಾಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ, 2018-19ರಲ್ಲಿ ಬ್ಯಾಂಕ್ ವಂಚನೆ ಪ್ರಕರಣಗಳು ಶೇ.15ರಷ್ಟು ಹೆಚ್ಚಳವಾಗಿದೆ ಎಂದು ಸ್ವತಃ ಆರ್ಬಿಐ ವರದಿ ನೀಡಿದೆ. ಇಷ್ಟೊಂದು ದೊಡ್ಡ ಮಟ್ಟದ ಬ್ಯಾಂಕ್ ವಂಚನೆ ಗಳಿಗೆ ಅವಕಾಶ ಕೊಡುತ್ತಿರುವ ಖಾತ್ರಿದಾರರು ಯಾರೆಂದು ಜನರಿಗೆ ಗೊತ್ತಾಗಬೇಕು ಎಂದು ಒತ್ತಾಯಿಸಿದ್ದಾರೆ.
ಕೇಂದ್ರ ಸರಕಾರ ಹಲವಾರು ಆರ್ಥಿಕ ಸುಧಾರಣೆಗಳನ್ನು ಕೈಗೊಳ್ಳುತ್ತಿದ್ದರೂ ಭಾರತದ ಆಂತರಿಕ ಪ್ರಗತಿ ದರ (ಜಿಡಿಪಿ) ಕನಿಷ್ಠ ಮಟ್ಟಕ್ಕೆ ಇಳಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 0.8ರಷ್ಟು ಕಡಿಮೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಿಡಿಪಿ ದರ ಶೇ. 5.8ರಷ್ಟಿತ್ತು. ದೇಶೀಯ ಉತ್ಪಾದನಾ ವಲಯದ ಮೇಳೆ ಆಗುತ್ತಿರುವ ನಕಾರಾತ್ಮಕ ಪರಿಣಾಮ ಹಾಗೂ ಜಾಗತಿಕ ಆರ್ಥಿಕ ಹಿನ್ನಡೆಯಿಂದಾಗಿ ಜಿಡಿಪಿ ದರ ಇಳಿಮುಖ ಕಂಡಿದೆ.