ಶ್ರೀನಗರ, ಆ.31(Daijiworld News/SS): ಪಾಕ್ ಪ್ರೇರಿತ ಉಗ್ರರು ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ರೂಪಿಸಿದ್ದ ಸಂಚು ಮತ್ತೊಮ್ಮೆ ಬಯಲಾಗಿದೆ. ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವೂ ರದ್ದಾಗಿರೋದ್ರಿಂದ ಕಣಿವೆ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಪಾಕಿಸ್ತಾನ ಯತ್ನಿಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇದೀಗ ಉಗ್ರ ಸಂಘಟನೆಗಳಾದ ಲಷ್ಕರ್ ಎ ತೋಯ್ಬಾ ಮತ್ತು ಹಿಜ್ಬುಲ್ ಮುಜಾಹಿದೀನ್ ಒಂದು ಪತ್ರ ಬಿಡುಗಡೆ ಮಾಡಿದ್ದು, 'ನಾವು ಸ್ವಾತಂತ್ರ್ಯದ ಸನಿಹದಲ್ಲಿದ್ದೇವೆ, ನಮ್ಮ ಕೆಲಸವನ್ನು ಇನ್ನೂ ಸಧೃಡಗೊಳಿಸಬೇಕಿದೆ' ಎಂದು ಪತ್ರದಲ್ಲಿ ಬರೆದುಕೊಂಡಿದೆ.
ಕಣಿವೆಯಲ್ಲಿ ಯಾರೂ ತಮ್ಮ ಮನೆಯಿಂದ ಹೊರಬರಬಾರದು. ಟ್ಯಾಕ್ಸಿಗಳನ್ನು ಓಡಿಸಬಾರದು. ಎಲ್ಲಾ ಟ್ಯಾಕ್ಸಿಗಳ ನೋಂದಣಿ ಸಂಖ್ಯೆಗಳು ನಮ್ಮ ಸಂಗ್ರಹದಲ್ಲಿದೆ. ಯಾರಾದರೂ ಟ್ಯಾಕ್ಸಿಗಳನ್ನು ರಸ್ತೆಗೆ ತಂದರೆ ಅವರು ಮುಂದಿನ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಉಗ್ರ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಈ ರೀತಿಯಾಗಿ ಉಗ್ರರು ಭಾರತದೊಳಗೆ ನುಸುಳಲು ಹಾಗೂ ವಿಧ್ವಂಸಕ ಕೃತ್ಯಗಳನ್ನು ಎಸಗಲು ಹೊಸ ಕುತಂತ್ರದ ಹಾದಿಗಳನ್ನು ಹುಡುಕುತ್ತಿದ್ದಾರೆ.