ಬೆಂಗಳೂರು, ಆ 31 (Daijiworld News/MSP): ಇನ್ಮುಂದೆ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಮಂಡಳಿಗಳು ಕರ್ನಾಟಕದಲ್ಲಿ ಏಕೈಕ ಮಂಡಳಿಯಾಗಿ ಹೊರಹೊಮ್ಮುವುದು ಗ್ಯಾರಂಟಿಯಾಗಿದೆ. ಈ ಪ್ರಕ್ರಿಯೆ ಡಿಸೆಂಬರ್ ಒಳಗೆ ಮುಗಿಯಲಿದ್ದು 2020 ರ ಮಾರ್ಚ್ ನಲ್ಲಿ ನಡೆಯುವ ಪರೀಕ್ಷೆಗೂ ಮುನ್ನ ಇದು ಖಚಿತವಾಗಿ ಜಾರಿಗೆ ಬರಲಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶುಕ್ರವಾರ ಈ ಬಗ್ಗೆ ಘೋಷಣೆ ಮಾಡಿದ್ದು, ಕರ್ನಾಟಕಕ್ಕೆ ಏಕೈಕ ಪರೀಕ್ಷಾ ಮಂಡಳಿ ಅಗತ್ಯವಿದೆ ಎಂದಿದ್ದಾರೆ.
ಪ್ರಸ್ತುತ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಕರ್ನಾಟಕ ಸೆಕೆಂಡರಿ ಎಜುಕೇಷನ್ ಎಕ್ಸಾಮಿನೇಷನ್ ಬೋರ್ಡ್ ಮತ್ತು ಪಿಯುಸಿ ಪರೀಕ್ಷೆಯನ್ನು ಪಿಯು ಶಿಕ್ಷಣ ಇಲಾಖೆ ನಡೆಸಿಕೊಂಡು ಬರುತ್ತಿದೆ. ಈ ಎರಡೂ ಎಕ್ಸಾಮಿನೇಷನ್ ಬೋರ್ಡ್ ಪರೀಕ್ಷೆಗೆ ಸಾಮಾನ್ಯವಾಗಿ ಒಂದೇ ಮಾದರಿಯನ್ನು ಅನುಸರಿಸುತ್ತಿದ್ದರೂ ಪ್ರತ್ಯೇಕವಾಗಿ ಕೋಟಿಯಷ್ಟು ಹಣವನ್ನು ಖರ್ಚು ಮಾಡುತ್ತಿವೆ.
ಎರಡು ಮಂಡಳಿಗಳ ವಿಲೀನಕ್ಕೆ 50 ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿದ್ದು, ಈ ವಿಲೀನ ಪ್ರಕ್ರಿಯೆಯಿಂದ ಎರಡೂ ಮಂಡಳಿಗಳಿಗೆ ಸಹಾಯವಾಗಲಿದೆ, ಸಾಕಷ್ಟು ಹಣ ಉಳಿತಾಯವಾಗಲಿದೆ ಎನ್ನುವುದು ಸರ್ಕಾರದ ಲೆಕ್ಕಾಚಾರವಾಗಿದೆ.