ಮಹಾರಾಷ್ಟ್ರ,ಆ 31 (Daijiworld News/RD): ಕೆಮಿಕಲ್ ಫ್ಯಾಕ್ಟರಿಯಲ್ಲಿ ಸಿಲಿಂಡರ್ ಸ್ಪೋಟಗೊಂಡು 12 ಮಂದಿ ಮೃತಪಟ್ಟಿದ್ದು, ಇನ್ನು 58 ಕ್ಕೂ ಅಧಿಕ ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಶಿರ್ಪುರ ತಾಲೂಕಿನ ವಾಘಡಿ ಗ್ರಾಮದಲ್ಲಿ ನಡೆದಿದೆ.
ಕಾರ್ಖಾನೆಯಲ್ಲಿ 100 ಕಾರ್ಮಿಕರು ಕೆಲಸ ಮಾಡುತ್ತಿದ್ದು, ಮುಂಜಾನೆ ಸುಮಾರು 9.45 ಕ್ಕೆ ಈ ಘಟನೆ ಸಂಭವಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಹಲವು ಸಿಲಿಂಡರ್ಗಳು ಸ್ಫೋಟಗೊಂಡು ಈ ದುರ್ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ, ರಕ್ಷಣಾ ಕಾರ್ಯ ಮುಂದುವರೆದಿದೆ ಎಂದು ಶಿರ್ಪುರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅನೇಕ ಸಿಲಿಂಡರ್ಗಳು ಸ್ಪೋಟಿಸಿದ ಹಿನ್ನೆಲೆ ಗಾಯಾಳುಗಳ ಸಂಖ್ಯೆ ಇನ್ನು ಹೆಚ್ಚುವ ಸಾಧ್ಯತೆ ಇದೆ. ಜೊತೆಗೆ ಕಾರ್ಖಾನೆಯಲ್ಲಿನ ವಿಷಕಾರಿಕ ಅನಿಲಗಳು ವಾತಾವರಣವನ್ನು ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಕಾರ್ಖಾನೆಯ ಸುತ್ತಮುತ್ತ ದಟ್ಟ ಹೊಗೆ ಆವರಿಸಿದ್ದು, ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಪ್ರಯತ್ನ ಮಾಡುತ್ತಿದೆ. ಸ್ಥಳದಲ್ಲಿ ಪೊಲೀಸರು, ವಿಪತ್ತು ನಿರ್ವಹಣಾ ತಂಡ ಕೂಡ ಆಗಮಿಸಿದ್ದು ರಕ್ಷಣಾ ಕಾರ್ಯದಲ್ಲಿ ತೊಡಗಿದೆ.