ಹಾಸನ, ಆ 31 (Daijiworld News/MSP): ಮಗಳು ತನ್ನ ಪ್ರಿಯಕರನೊಂದಿಗೆ ಸೇರಿ ಹದಿನೈದು ಲಕ್ಷ ಸುಪಾರಿ ನೀಡಿ ತಂದೆಯನ್ನೇ ಹತ್ಯೆ ಮಾಡಿದ ಘಟನೆ ಹಾಸನದಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಹಾಸನ ನಗರ ಪೊಲೀಸರು ಪುತ್ರಿ ಹಾಗೂ ಆಕೆಯ ಪ್ರಿಯಕರ ಸೇರಿ ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ವಿದ್ಯಾ, ಆಕೆಯ ಪ್ರಿಯಕರ ಚಿದಾನಂದ ಹಾಗೂ ರಘು ಎಂದು ಗುರುತಿಸಿದ್ದು ಈಕೆ ತನ್ನ ತಂದೆಯ ಹತ್ಯೆಗಾಗಿ ವಿದ್ಯಾ ಹದಿನೈದು ಲಕ್ಷ ರೂ. ಸುಪಾರಿ ನೀಡಿದ್ದಳು.
ಆರೋಪಿ ವಿದ್ಯಾಗೆ ಈಗಾಗಲೇ ವಿವಾಹವಾಗಿದ್ದರೂ ಪತಿಯನ್ನು ತೊರೆದು, ಪ್ರಿಯಕರ ಚಿದಾನಂದನೊಂದಿಗೆ ಓಡಾಡುತ್ತಿದ್ದಳು. ಇದನ್ನು ಗಮನಿಸಿದ್ದ ವಿದ್ಯಾ ತಂದೆ ಮುನಿರಾಜು ಆಕೆಯ ನಡೆತೆ ವಿರೋಧಿಸಿ ಬುದ್ದಿಮಾತು ಹೇಳಿದ್ದಾರೆ. ಇದರಿಂದ ಆಕ್ರೋಶಿತಳಾಗಿದ್ದ ವಿದ್ಯಾ ಆಗಸ್ಟ್ 23ರಂದು ಪ್ರಿಯಕರ ಚಿದಾನಂದ್ ಹಾಗೂ ರಘು ಎಂಬಾತನ ಜತೆ ಸೇರಿ ತಂದೆ ಮುನಿರಾಜುವನ್ನು ಹತ್ಯೆ ಮಾಡಿದ್ದು ಹೇಮಾವತಿ ಹಿನ್ನೀರಿಗೆ ಎಸೆದಿದ್ದಾರೆ.
ಆ ಬಳಿಕ ಏನನ್ನು ಅರಿಯದವಳಂತೆ ತಂದೆ ನಾಪತ್ತೆಯಾಗಿದ್ದಾರೆ ಎಂದು ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಆಕ್ಸ್ ಕೇಬಲ್, ಚಾಕು ಬಳಸಿ ಹತ್ಯೆ ಮಾಡಿದ ಮುನಿರಾಜು ಮೃತದೇಹ ಮಾಲೂರಿನ ಮಣಿಗನಹಳ್ಳಿ ಪತ್ತೆಯಾಗಿತ್ತು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ವಿದ್ಯಾಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಹೊರಬಂದಿದೆ.