ಮಂಡ್ಯ, ಆ.31(Daijiworld News/SS): ಮಾಜಿ ಸಚಿವ ಡಿ. ಕೆ. ಶಿವಕುಮಾರ್ ವಿಚಾರದಲ್ಲಿ ಬಿಜೆಪಿ ಯಾವ ರಾಜಕೀಯವನ್ನು ಮಾಡುತ್ತಿಲ್ಲ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.
ದೇಶದಲ್ಲಿ ಯಾರು ಅಕ್ರಮವಾಗಿ ಹಣ ಮಾಡಿದ್ದಾರೆ ಅವರೆಲ್ಲರ ವಿರುದ್ದವೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಕಾನೂನು ಅದರ ದಾರಿಯನ್ನು ಅದೇ ತೆಗೆದುಕೊಳ್ಳುತ್ತದೆ. ಈ ಪ್ರಕರಣ ಇವತ್ತು ನಿನ್ನೆಯದಲ್ಲ. ಅಕ್ರಮವಾಗಿ ಹಣ ಮಾಡಿರುವ ಹಿನ್ನಲೆಯಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಡಿಕೆಶಿ ವಿಚಾರದಲ್ಲಿ ಬಿಜೆಪಿ ಯಾವ ರಾಜಕೀಯ ಮಾಡುತ್ತಿಲ್ಲ. ಹೈಕೋರ್ಟ್ ಅವರ ಅರ್ಜಿ ವಜಾ ಮಾಡಿದ ಹಿನ್ನಲೆಯಲ್ಲಿ ಇಡಿ ಮುಂದೆ ಹಾಜರಾಗಿದ್ದಾರೆ. ಡಿಕೆಶಿ ವಿಚಾರವನ್ನು ರಾಜಕಾರಣಗೊಳಿಸುವ ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ದೇಶದ ಎಲ್ಲೆಡೆ ಕಾಂಗ್ರೆಸ್ ಅವಸಾನದ ಅಂಚಿನಲ್ಲಿದೆ. ಮಧ್ಯಪ್ರದೇಶದಲ್ಲಿ ಜೋತಿರಾಧಿತ್ಯ ಸಿಂಧ್ಯಾ ಪಾರ್ಟಿ ಬಿಡೋದಾಗಿ ಹೇಳಿದ್ದಾರೆ. ದೇಶದ ಮೂಲೆ ಮೂಲೆಯಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆ ವಿಚಾರದಲ್ಲಿ ಶಾಸಕರ ಅಸಮಾಧಾನ ವಿಚಾರವಾಗಿ ಮಾತನಾಡಿದ ಅವರು, ಸಚಿವ ಸ್ಥಾನದ ಆಕಾಂಕ್ಷಿಗಳು ಹೆಚ್ಚಾಗಿದ್ದರು. ಸಚಿವ ಸ್ಥಾನ ಸಿಗದೇ ಹೋದವರಿಗೆ ಸ್ವಲ್ಪ ದಿನ ಹಾರ್ಟ್ ಬರ್ನಿಂಗ್ ಆಗುತ್ತದೆ. ರಾಜ್ಯ ಬಿಜೆಪಿಯಲ್ಲಿ ಸಮನ್ವಯ ಸಮಿತಿ ರಚನೆ ಆಗಲ್ಲ. ನಮ್ಮ 106 ಶಾಸಕರೂ ಡಿಸಿಎಂ ಆಗಲು ಅರ್ಹರಿದ್ದಾರೆ. ಯಡಿಯೂರಪ್ಪ ಸಿಎಂ ಆದ ತಕ್ಷಣ ಸಿಂಗಲ್ ಮ್ಯಾನ್ ಆರ್ಮಿ ಆಗಿ ಓಡಾಡಿದ್ದಾರೆ ಎಂದು ಹೇಳಿದರು.